International News: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡನೇ ಅವಧಿಯನ್ನು ನಿಭಾಯಿಸುತ್ತಿದ್ದಾರೆ. ತಾವು ಅಧಿಕಾರ ಸ್ವೀಕರಿಸಿದ್ದಾಗಿನಿಂದಲೂ ಒಂದಿಲ್ಲೊಂದು ವಿವಾದಾತ್ಮಕ ಆದೇಶಗಳು ಹಾಗೂ ಆಘಾತಕಾರಿ ನಿರ್ಣಯಗಳನ್ನು ಪಡೆಯುವ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ಅಮೆರಿಕದ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ.
ಇನ್ನೂ ಈ ಕುರಿತು ಸಂದರ್ಶನವೊಂದರಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ ಹಲವು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೀವು ಮೂರನೇ ಬಾರಿಗೆ ಮತ್ತೆ ಅಧ್ಯಕ್ಷರಾಗಲು ಒಲವನ್ನು ತೋರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ನಿಜವಾಗಿಯೂ ನಾನು ತಮಾಷೆ ಮಾಡುತ್ತಿಲ್ಲ, ನನಗೆ ಕೆಲಸ ಮಾಡುವುದು ಅಂದ್ರೆ ತುಂಬಾ ಇಷ್ಟವಾಗುತ್ತದೆ. ಈಗಾಗಲೇ ಅಮೆರಿಕದ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಮೂರನೇ ಅವಧಿಗೆ ಅಧ್ಯಕ್ಷನಾಗಬೇಕೆಂದು ಸಾಕಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಇನ್ನಷ್ಟು ದೂರದ ಪ್ರಯಾಣ ಮಾಡಬೇಕಿದೆ ಎನ್ನುವ ಮೂಲಕ ಟ್ರಂಪ್ ಇನ್ನೂ ಅಧಿಕಾರದಲ್ಲಿರುವಾಗಲೇ ತಮ್ಮ ಮೂರನೇ ಅವಧಿಯ ಅಧ್ಯಕ್ಷ ಗಿರಿಯ ಕುರಿತ ಕನಸು ಹೊರಹಾಕಿದ್ದಾರೆ.
ಅಲ್ಲದೆ ಅಮೆರಿಕದಲ್ಲಿ ಮೂರನೇ ಅವಧಿಗೆ ಅಧ್ಯಕ್ಷರಾಗಲು ಇರುವ ಸಾಧ್ಯತೆಗಳು ಹಾಗೂ ನೀತಿ ನಿಯಮಗಳ ಬಗ್ಗೆ ಚರ್ಚೆ ನಡೆಸಿದ್ದೀರಾ.? ಎಂಬ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ಇದಕ್ಕಾಗಿಯೇ ಅನೇಕ ವಿಧಾನಗಳಿವೆ ಎಂದಿದ್ದಾರೆ. ಇನ್ನೂ ಮೂರನೇ ಅವಧಿಯ ವೇಳೆ ಈಗಿನ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಎಲೆಕ್ಷನ್‌ಗೆ ಸ್ಪರ್ಧಿಸಿ ಬಳಿಕ ಅದೇ ಸ್ಥಾನವನ್ನು ನಿಮಗೆ ತ್ಯಾಗ ಮಾಡುವ ಸಾಧ್ಯತೆಗಳು ಇವೆಯಾ..? ಎಂಬ ಪ್ರಶ್ನೆಗೆ ಕೇವಲ ಅದೊಂದು ಪ್ರಕ್ರಿಯೆ ಅಷ್ಟೇ ಆಗಿದೆ, ಆದರೆ ಇನ್ನೊಂದು ವಿಧಾನದ ಬಗ್ಗೆ ಟ್ರಂಪ್ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಅಮೆರಿಕದಲ್ಲಿ ಮೂರು ಬಾರಿ ಅಧ್ಯಕ್ಷರಾಗಬಹುದೆ..? ಸಂವಿಧಾನ ಏನು ಹೇಳುತ್ತೆ..?
ಅಂದಹಾಗೆ ಅಮೆರಿಕದಲ್ಲಿ ಸಂವಿಧಾನದ ಪ್ರಕಾರ ಮೂರನೇ ಬಾರಿಗೆ ಅಧ್ಯಕ್ಷರಾಗಲು ಅವಕಾಶವಿಲ್ಲ, ಬದಲಿಗೆ ಅವರು ತಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವ ಮೂಲಕ ಸ್ಪರ್ಧೆ ಮಾಡಬಹುದಾಗಿದೆ. ಆದರೆ 1951ರ ತಿದ್ದುಪಡಿಯ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧವಿದೆ. ಒಂದು ವೇಳೆ ಟ್ರಂಪ್ ಮೂರನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯಬೇಕಾದರೆ ಅಮೆರಿಕದ 22ನೇ ತಿದ್ದುಪಡಿಯನ್ನು ರದ್ದುಗೊಳಿಸಬೇಕಾಗುತ್ತದೆ.
ಇನ್ನೂ ಪ್ರಮುಖವಾಗಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಟ್ರಂಪ್ ಸದನದ 290 ಸದಸ್ಯರ ಹಾಗೂ 67 ಸೆನೆಟ್ ಮೆಂಬರ್‌ಗಳ ಬೆಂಬಲ ಪಡೆಯಬೇಕಾಗುತ್ತದೆ. ಅಲ್ಲದೆ ಅಮೆರಿಕದಲ್ಲಿನ ಎಲ್ಲಾ ರಾಜ್ಯಗಳ ನಾಲ್ಕನೇ ಮೂರು ಭಾಗದಷ್ಟು ಅಂದರೆ 38 ಸದಸ್ಯರು ಕೂಡ ತಮ್ಮ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಇದು ಒಂದೆಡೆಯಾದರೆ ಇನ್ನೂ ತಮ್ಮದೇ ಪಕ್ಷದ ಕೆಲವು ಸಂಸದರು ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಬಹುದು, ಜೊತೆಗೆ ಡೆಮಾಕ್ರಟಿಕ್ ಪಕ್ಷದ ಪ್ರಬಲ ವಿರೋಧವೂ ಟ್ರಂಪ್‌ಗೆ ದೊಡ್ಡ ತಲೆನೋವಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸಂವಿಧಾನದ 22ನೇ ತಿದ್ದುಪಡಿಯು ಅಷ್ಟೊಂದು ಸುಲಭವಾಗಿಲ್ಲ.
ದಾಖಲೆ ಬರೆದಿದ್ದ ಫ್ರಾಂಕ್ಲಿನ್ ರೂಸ್ವೆಲ್ಟ್..
ಅಂದಹಾಗೆ ಅಮೆರಿಕದಲ್ಲಿ ಇರುವ ಸಂವಿಧಾನದ ಪ್ರಕಾರವೇ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಕೇವಲ ಎರಡು ಅವಧಿಗೆ ಅಧಿಕಾರದಲ್ಲಿದ್ದು ಒಂದು ಮೇಲ್ಪಂಕಿ ಹಾಕಿಕೊಟ್ಟಿದ್ದರು. ಆದರೆ ನಂತರದ ಅವಧಿಯಲ್ಲಿ ಬಂದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಇದಕ್ಕೆ ವಿರುದ್ಧವಾಗಿ ನಾಲ್ಕು ಬಾರಿ ಅಧ್ಯಕ್ಷರಾಗಿದ್ದರು. ಅಲ್ಲದೆ ಅಮೆರಿಕದಲ್ಲಿ ಹೆಚ್ಚು ಬಾರಿ ಅಧ್ಯಕ್ಷರಾಗಿದ್ದ ಏಕೈಕ ಮತ್ತು ಮೊದಲ ನಾಯಕನೂ ಇವರೇ ಆಗಿದ್ದಾರೆ ಅನೋದನ್ನು ಮನಗಂಡು ಟ್ರಂಪ್ ಕೂಡ ಅದೇ ಹಾದಿ ತುಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.