Tuesday, April 8, 2025

Latest Posts

ಟ್ರಂಪ್‌, ಮಸ್ಕ್‌ ನೀವು ದೇಶ ಬಿಟ್ಟು ತೊಲಗಿ : ಅಮೆರಿಕ ಅಧ್ಯಕ್ಷನ ವಿರುದ್ಧ ರೊಚ್ಚಿಗೆದ್ದ ಜನ

- Advertisement -

International News: ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಬಳಿಕ ದೇಶದಲ್ಲಿ ಜಾರಿಗೆ ತಂದ ವಿವಾದಾತ್ಮಕ ಹಾಗೂ ಜನ ವಿರೋಧಿ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖವಾಗಿ ಅಮೆರಿಕದಲ್ಲಿನ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಕಡಿತ, ತೆರಿಗೆ ಹೆಚ್ಚಳ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಇತರ ಹಲವು ವಿಷಯಗಳನ್ನು ಟ್ರಂಪ್‌ ಹಾಗೂ ಉದ್ಯಮಿ ಎಲಾನ್‌ ಮಸ್ಕ್‌ ವಿರುದ್ಧ ದೇಶಾದ್ಯಂತ 1,200ಕ್ಕೂ ಹೆಚ್ಚು ಕಡೆಗಳಲ್ಲಿ ಬೀದಿಗಿಳಿದು ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇನ್ನೂ ಸರ್ಕಾರದ ದಮನಕಾರಿ ಆಡಳಿತ ನೀತಿ ಹಾಗೂ ಟ್ರಂಪ್‌ ಸಲಹೆಗಾರ ಎಲಾನ್‌ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತಾ ಇಲಾಖೆಯಲ್ಲಿ ಕೈಗೊಂಡಿರುವ ಆಕ್ಷೇಪಾರ್ಹ ಕ್ರಮಗಳ ವಿರುದ್ಧ ದೇಶದ ಬಹುತೇಕ ರಾಜ್ಯಗಳ ಜನರು ಹ್ಯಾಂಡ್ಸ್‌ ಅಪ್‌ ಹೆಸರಿನಲ್ಲಿ ಬೃಹತ್‌ ಜನಾಂದೋಲನ ನಡೆಸಿ ಟ್ರಂಪ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಟ್ರಂಪ್‌ ಸರ್ಕಾರವು ಮುಖ್ಯವಾಗಿ ತಾನು ಮಾಡಿರುವ ಸ್ವಯಂಕೃತ ಅಪರಾಧಗಳಿಂದಲೇ ಇವತ್ತು ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗಿದೆ. ಅಂದಹಾಗೆ ಸಾವಿರಾರು ನೌಕರರನ್ನು ಕೆಲಸದಿಂದ ಕೈ ಬಿಟ್ಟಿರುವುದು, ಸಾಮಾಜಿಕ ಭದ್ರತೆಗಳನ್ನು ಒದಗಿಸುವ ಕಚೇರಿಗಳನ್ನು ಮುಚ್ಚಿರುವುದು, ಬೃಹತ್‌ ಪ್ರಮಾಣದಲ್ಲಿ ವಲಸಿಗರ ಗಡೀಪಾರು, ಲಿಂಗತ್ವ ಅಲ್ಪಸಂಖ್ಯಾತರ ಸುರಕ್ಷತೆಗೆ ಇದ್ದ ಯೋಜನೆಗಳನ್ನು ರದ್ದುಪಡಿಸಿರುವುದು ಹಾಗೂ ಆರೋಗ್ಯ ವಲಯದಲ್ಲಿನ ಕಾರ್ಯಕ್ರಮಗಳಿಗಾಗಿ ಅನುದಾನ ನಿಲ್ಲಿಸಿರುವುದು ಅಲ್ಲಿನ ಜನರು ರೊಚ್ಚಿಗೇಳುವಂತೆ ಮಾಡಿದೆ.

ಬೀದಿಗಿಳಿದ 150ಕ್ಕೂ ಅಧಿಕ ಸಂಘಟನೆಗಳು..

ಅಲ್ಲದೆ ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಅಮೆರಿಕದ ವಾಷಿಂಗ್ಟನ್‌ ಡಿಸಿಯ ನ್ಯಾಷನಲ್‌ ಮಾಲ್‌, ಮೆಸ್ಸಾಚುಸೆಟ್ಟ್‌ನ ಬಾಸ್ಟನ್‌ ಕಾಮನ್‌ ಪಾರ್ಕ್‌ ಸೇರಿದಂತೆ ಹಲವೆಡೆ 150ಕ್ಕೂ ಅಧಿಕ ಸಂಘಟನೆಗಳು ಬೀದಿಗಿಳಿದು ಟ್ರಂಪ್‌ ಹಾಗೂ ಮಸ್ಕ್‌ ವಿರುದ್ಧ ಕೆರಳಿ ಕೆಂಡವಾಗಿದ್ದವು. ಇನ್ನೂ ಮಾಜಿ ಸೈನಿಕರು, ಚುನಾವಣೆಯಲ್ಲಿ ಟ್ರಂಪ್‌ ವಿರುದ್ಧ ಪ್ರಚಾರ ನಡೆಸಿದವರು, ನಾಗರಿಕ ಹಕ್ಕುಗಳ ಮತ್ತು ಕಾರ್ಮಿಕ ಸಂಘಟನೆಗಳು, ಎಲ್‌ಜಿಬಿಟಿಕ್ಯು ಸಮುದಾಯದವರೂ ಸಹ ಭಿತ್ತಿ ಪತ್ರಗಳನ್ನು ಹಿಡಿದು ಹೋರಾಟದಲ್ಲಿ ಭಾಗಿಯಾಗಿದ್ದರು. ಇನ್ನೂ ಪ್ರತಿಭಟನಾಕಾರರು ಟ್ರಂಪ್‌ ಹಾಗೂ ಎಲಾನ್‌ ಮಸ್ಕ್‌ ಇಬ್ಬರು ದೇಶ ಬಿಟ್ಟು ಹೋಗಿ ಎಂಬ ಘೋಷಣೆಗಳನ್ನು ಕೂಗಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಮಳೆಯಲ್ಲೂ ಪ್ರತಿಭಟನೆ..

ಫ್ಲಾರಿಡಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಒಡೆತನದಲ್ಲಿರುವ ಗಾಲ್ಫ್‌ ಕೋರ್ಸ್‌ನಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿರುವ ಪಾಮ್‌ ಬೀಚ್‌ ಗಾರ್ಡನ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಅಲ್ಲದೆ ಒಹಿಯೊದ ಕೊಲಂಬಸ್‌ನಲ್ಲಿ ಜನರು ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿ ಟ್ರಂಪ್‌ ಸರ್ಕಾರದ ನೀತಿಗಳನ್ನು ಖಂಡಿಸಿದರು. ಮ್ಯಾನ್‌ಹಟನ್‌ನಿಂದ ಆಂಕೋರಟ್‌ವರೆಗೆ, ಅಲಾಸ್ಕಾದಿಂದ ಲಾಸ್ ಏಂಜಲೀಸ್‌ವರೆಗೆ ಬಹಳಷ್ಟು ರಾಜ್ಯಗಳ ರಾಜಧಾನಿಗಳಲ್ಲಿ ರ್ಯಾಲಿ ನಡೆಸಿದ ಸಾವಿರಾರು ಪ್ರತಿಭಟನಾಕಾರರು ಸರ್ಕಾರವನ್ನು ಅವನತಿಯತ್ತ ಕೊಂಡೊಯ್ಯುತ್ತಿರುವ ಟ್ರಂಪ್ ಮತ್ತು ಶತಕೋಟ್ಯಾಧೀಶ ಎಲಾನ್ ಮಸ್ಕ್‌ರವರ ಆರ್ಥಿಕ ಮತ್ತು ವಲಸೆ ಹಾಗೂ ಮಾನವಹಕ್ಕುಗಳ ಮೇಲಿನ ದಾಳಿಗಳ ವಿರುದ್ಧ ಟೀಕಾಪ್ರಹಾರ ನಡಸಿದ್ದಾರೆ.

- Advertisement -

Latest Posts

Don't Miss