Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ – ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ ನಡುವೆಯೇ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಕೂಡ ಜಾತಿ ಗಣತಿಯನ್ನು ಒಪ್ಪಲು ಆಗಲು ಎಂದು ಹೇಳಿದ್ದಾರೆ. ಈ ಮೂಲಕ ಜಾತಿ ಗಣತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರ ಈ ಹೇಳಿಕೆ ಇದೀಗ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಹಳೆಯ ವರದಿ ಈಗ್ಯಾಕೆ ಪ್ರಕಟಿಸುತ್ತಿರೋದು..?
ಇನ್ನೂ ಈ ಕುರಿತು ತುಮಕೂರಿನಲ್ಲಿ ಮಾತನಾಡಿರುವ ಅವರು, ಜಾತಿ ಗಣತಿ ವರದಿಯ ಬಗ್ಗೆ ನನಗೆ ಏನೂ ತಿಳಿದಿಲ್ಲ, ಅಷ್ಟಕ್ಕೂ ಹತ್ತು ವರ್ಷಗಳ ಹಳೆಯದಾದ ವರದಿಯನ್ನು ಈಗ ಪ್ರಕಟಿಸುವುದು ಅಷ್ಟೊಂದು ನ್ಯಾಯಯೋಚಿತವಲ್ಲ. ಈಗ ಪುನಃ ಜಾತಿ ಗಣತಿ ಮಾಡುವುದು ಸೂಕ್ತವಾಗಿರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ ಈಗ ವರದಿಯನ್ನು ಯಾಕೆ ಹೊರತಂದಿದ್ದಾರೆ, ಅದನ್ನು ಪ್ರಕಟಿಸುವುದು ಏನಿದೆ..? ಆಗಿನಿಂದ ಇಲ್ಲಿಯವರೆಗೆ ಅದೆಷ್ಟೋ ಬದಲಾವಣೆಗಳು ಆಗಿರಬಹುದು. ಅಂದಹಾಗೆ ಜನಸಂಖ್ಯೆಯು ಹೆಚ್ಚಳವಾಗಿರಬಹುದು, ಬೇರೆ ಎಷ್ಟೋ ಬೆಳವಣಿಗೆಗಳು ಘಟಿಸಿರಬಹುದು ಎಂದು ಹೇಳಿದ್ದಾರೆ. ಸರ್ಕಾರ ಸಮಿತಿ ರಚನೆ ಮಾಡಿ, ಜಾತಿಗಣನೆ ಮಾಡಲಿ. ಅದರ ಆಧಾರದ ಮೇಲೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಹಿನ್ನೆಲೆ ತಿಳಿದುಕೊಂಡು ಆಯಾ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎನ್ನುವುದು ಶ್ಲಾಘನೀಯ. ಈಗಿನ ಜಾತಿ ಗಣತಿಯ ಬಗ್ಗೆ ಬಹುತೇಕರು ಗೊತ್ತಿಲ್ಲ ಎನ್ನುತ್ತಿದ್ದಾರೆ. ಎಲ್ಲೋ ಒಂದು ಕಡೆ ಅದು ಎಲ್ಲರನ್ನೂ ತಲುಪಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲರನ್ನೂ ಒಳಗೊಂಡ ಸಮೀಕ್ಷೆಯಾಗಲಿ..
ಈ ಜಾತಿ ಗಣತಿಯ ಬಗ್ಗೆ ನಮಗೆ ಗೊತ್ತೇ ಇಲ್ಲ, ನನಗಂತೂ ಇದರ ಬಗ್ಗೆ ಯಾರೂ ಕೇಳಿಲ್ಲ. ಮತ್ತೊಮ್ಮೆ ವೈಜ್ಞಾನಿಕವಾಗಿ ಎಲ್ಲರನ್ನೂ ಕೇಳಲಿ, ಹೀಗಾಗಿ ಸಣ್ಣ ಹಳ್ಳಿಯಿಂದ ಎಲ್ಲರನ್ನೂ ಒಳಗೊಂಡು ಅವರನ್ನೆಲ್ಲ ಭೇಟಿ ಮಾಡಿ ಮತ್ತೊಮ್ಮೆ ಹೊಸದಾಗಿ ಸಮೀಕ್ಷೆ ಮಾಡುವುದು ಒಳ್ಳೆಯದು ಎಂದು ಶ್ರೀಗಳು ಸಲಹೆ ನೀಡಿದ್ದಾರೆ. ಅಲ್ಲದೆ ದೇಶದಲ್ಲಿ ಜಾತಿ ಬಿಟ್ಟು ಏನೂ ನಡೆಯುತ್ತಿಲ್ಲ, ಅದು ನಿರ್ಮೂಲನೆಯಾಗಬೇಕು ಅಂದುಕೊಂಡಷ್ಟು ಜಾಸ್ತಿಯಾಗುತ್ತಿದೆ, ಬದಲಿಗೆ ಕಡಿಮೆಯಾಗುತ್ತಿಲ್ಲ. ಈಗಿನ ದಿನಗಳಲ್ಲಿ ಜಾತಿ ಬಿಟ್ಟು ಬದುಕುತ್ತೇವೆ ಎನ್ನುವುದು ಕಷ್ಟವೆನಿಸುತ್ತದೆ ಎಂದು ಸಿದ್ದಲಿಂಗ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ನ್ಯಾಯ ಒದಗಿಸಿಕೊಡುವಂತಹ ಕೆಲಸ ಮಾಡಬೇಕು. ಎಲ್ಲಾ ಸಮಾಜದಲ್ಲೂ ಹಿಂದುಳಿದವರು, ಬಡವರು, ನಿರ್ಗತಿಕರಿದ್ದಾರೆ. ಅವರೆಲ್ಲರನ್ನೂ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅವರಿಗೆ ನೌಕರಿ, ಉತ್ತಮ ಶಿಕ್ಷಣ ಒದಗಿಸಿಕೊಡಬೇಕಿದೆ. ಹಾಗಾದರೆ ಮಾತ್ರ ಆರೋಗ್ಯಪೂರ್ಣ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಅಸಮಾನತೆ ಹೋಗಲಾಡಿಸಬೇಕು, ಸಮಾನತೆಯನ್ನ ತರಬೇಕು. ಹಿಂದುಳಿದವರನ್ನ ಮುಂದೆ ತರಬೇಕು, ಬಡವರನ್ನ ಮೇಲೆತ್ತಬೇಕು ಎನ್ನುವ ಉದ್ದೇಶ ಒಳ್ಳೆಯದಾಗಿದೆ. ನಮ್ಮ ಸಂವಿಧಾನದ ನೀತಿಯೂ ಅದೇ ಆಗಿದೆ. ಆ ಹಿನ್ನೆಲೆಯಲ್ಲಿ ಜಾತಿಗಣತಿ ಮಾಡಿ ಅದನ್ನ ಮತ್ತೊಮ್ಮೆ ವೈಜ್ಞಾನಿಕವಾಗಿ ಮಾಡಲಿ. ಪ್ರತಿಯೊಬ್ಬರನ್ನ ವಿಚಾರ ಮಾಡಿ ಆ ಮೂಲಕ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಸರ್ಕಾರದ ಮೇಲಿದೆ ಎಂದಿದ್ದಾರೆ.
ಜಾತಿಗಣತಿ ಕೇವಲ ಸಂಖ್ಯಾ ಲೆಕ್ಕಾಚಾರವಲ್ಲ, ಇದು ಸಮಾಜದ ಸ್ಥಿತಿಗತಿಯ ನಿಖರ ಚಿತ್ರಣ ಕೊಡಬಲ್ಲದು. ಹೀಗಾಗಿ ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಿ, ಅದರ ಆಧಾರದ ಮೇಲೆ ಯೋಜನೆ ರೂಪಿಸಿ, ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.