Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣ ತಾಲೂಕು ಅಕ್ಕೂರು ಪಟ್ಟಣದ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಹೆಡ್‌ಕಾನ್ಸೇಟಬಲ್ ಸುನೀಲ್ (36) ಮತ್ತು ಐಶ್ವರ್ಯಗೌಡ ಕಾರು ಚಾಲಕ ಪವನ್ ಗೌಡ(34) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಐಶ್ವರ್ಯಗೌಡಗೆ ಸುಮಾರು ಆರೇಳು ವ್ಯಕ್ತಿಗಳ ನಂಬರ್ ಡಿಟೇಲ್ಸ್ ಕಲೆಕ್ಟ್ ಮಾಡಿಕೊಟ್ಟಿದ್ದಾರೆಂದು ಹೇಳಲಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಇಬ್ಬರು ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಐಶ್ವರ್ಯಗೌಡ ಅಕ್ರಮವಾಗಿ ಕೆಲ ವ್ಯಕ್ತಿಗಳ ಕಾಲ್ ಡೇಟಾ ರೆಕಾರ್ಡ್ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೀಡಿದ ದೂರಿನ ಮೇರೆಗೆ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಮತ್ತು ದೂರಸಂಪರ್ಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಐಶ್ವರ್ಯಾ ಗೌಡ, ಆಕೆಯ ಪತಿ ಮತ್ತು ಇನ್ನಿತರರ ವಿರುದ್ಧ ಕಳೆದ ವರ್ಷ ಚಂದ್ರಾ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಎಸಿಪಿ ಭರತ್ ರೆಡ್ಡಿ, ಐಶ್ವರ್ಯ ಪತಿಯಿಂದ 7 ಮೊಬೈಲ್ ಜಪ್ತಿ ಮಾಡಿದ್ದರು. ಈ ಪೈಕಿ ಐಶ್ವರ್ಯಾಳ ಐಫೋನ್ ಚೆಕ್ ಮಾಡಿದಾಗ, ಅದರಲ್ಲಿ ನಾಲ್ವರ ಕಾಲ್ ರೆಕಾರ್ಡ್ ಪತ್ತೆಯಾಗಿತ್ತು.
ಈ ಸಂಬಂಧ ವಿಜಯನಗರ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದಾಗ, ಅಕ್ಕೂರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸುನೀಲ್ ಮೂಲಕ ತನ್ನ ಆಪ್ತ ಪವನ್‌ನಿಂದ ಸಿಡಿಆರ್ ಸಂಗ್ರಹಿಸುತ್ತಿದ್ದಳು ಎಂಬುದು ಗೊತ್ತಾಗಿದೆ. ಇದೀಗ ಇಬ್ಬರನ್ನೂ ಬಂಧಿಸಲಾಗಿದೆ.
ಪ್ರತೀ ಕಾಲ್ ರೆಕಾರ್ಡ್‌ಗಳು ಆರೋಪಿಗಳು ಪಡೆಯುತ್ತಿದ್ದದ್ದು 40 ಸಾವಿರ ರೂಪಾಯಿ
ಐಶ್ವರ್ಯಾಗೆ ಬೇಕಾದ ಕಾಲ್ ರೆಕಾರ್ಡ್ ಸಂಗ್ರಹಿಸಿ ಕೊಡಲು ಸುನೀಲ್ ಮತ್ತು ಪವನ್, ಒಂದು ಕಾಲ್ ರೆಕಾರ್ಡ್‌ಗೆ 40 ಸಾವಿರ ರೂಪಾಯಿ ಪಡೆಯುತ್ತಿದ್ದರು. ಇದೀಗ ಸುನೀಲ್ ಮತ್ತು ಪವನ್‌ನನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.