Ayodhya News: ಹೋಳಿ ಹಬ್ಬ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಹೀಗಾಗಿ ಮುಸ್ಲಿಮರಿಗೆ ಹೋಳಿ ಬಣ್ಣಗಳು ಇಷ್ಟವಾಗದಿದ್ದರೆ ಅವರು ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ಉತ್ತರ ಪ್ರದೇಶದ ಸಂಭಲ್‌ನ ಡಿಎಸ್‌ಪಿ ಅನುಜ್ ಕುಮಾರ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಈ ಹೇಳಿಕೆಯನ್ನು ಖದ್ದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಸಹ ಬೆಂಬಲಿಸಿದ್ದರು. ಆದರೆ ಈ ಬೆಳವಣಿಗೆಯ ನಡುವೆಯೇ ಇದೀಗ ಅಯೋಧ್ಯೆಯ ಮುಸ್ಲಿಂ ಧರ್ಮಗುರುಗಳು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.
ಇನ್ನೂ ಶುಕ್ರವಾರ ದಿನ ಹೋಳಿ ಇರುವುದರಿಂದ ಅಯೋಧ್ಯೆಯ ಎಲ್ಲೆಡೆ ಜುಮ್ಮಾ ಪ್ರಾರ್ಥನೆಯನ್ನು ಮಧ್ಯಾಹ್ನ 2 ಗಂಟೆಯ ಬಳಿಕ ನಡೆಸುತ್ತೇವೆ. ಅಲ್ಲದೆ ಇದು ಈ ವರ್ಷದ ಪವಿತ್ರ ರಂಜಾನ್ ಹಬ್ಬದ ಎರಡನೇ ಶುಕ್ರವಾರದ ಪ್ರಾರ್ಥನೆಯೂ ಆಗಿದೆ. ಅಂದಹಾಗೆ ಹೋಳಿ ಆಚರಣೆಯನ್ನು ನೋಡಿಕೊಂಡು ಅದಾದ ಬಳಿಕ ಜುಮ್ಮಾ ಪ್ರಾರ್ಥನೆಯ ಸಮಯವನ್ನು ತೀರ್ಮಾನಿಸಲಾಗುವುದು. ಅಲ್ಲದೆ ಮಧ್ಯಾಹ್ನ 2 ಗಂಟೆಯ ನಂತರ ಪ್ರಾರ್ಥನೆ ಇಟ್ಟುಕೊಳ್ಳಬೇಕು ಎಂದು ನಾವು ಎಲ್ಲಾ ಮಸೀದಿಗಳಿಗೆ ಸೂಚಿಸಿದ್ದೇವೆ. ಅಂದು ಸಂಜೆ 4.30ರ ವರಗೆ ಜುಮ್ಮಾ ನಮಾಜ್ ಕೈಗೊಳ್ಳಲು ಅವಕಾಶ ಇದೆ ಎಂದು ಅಯೋಧ್ಯೆಯ ಕೇಂದ್ರ ಮಸೀದಿ ಹಾಗೂ ಮಸ್ಜಿದ್ ಸರಾರಿಯ ಅಧ್ಯಕ್ಷರೂ ಆಗಿರುವ ಮೊಹಮಮ್ಮದ್ ಹನೀಫ್ ತಿಳಿಸಿದ್ದಾರೆ.
ಅಲ್ಲದೆ ಹೋಳಿ ಹಬ್ಬದ ಸಮಯದಲ್ಲಿ ಯಾರೂ ಅನಗತ್ಯ ವಿವಾದಗಳನ್ನು ಸೃಷ್ಟಿಸಬಾರದು. ಶಾಂತ ರೀತಿಯಾಗಿ ಎಲ್ಲರೂ ಉದಾರಿಗಳಾಗಿ ಇರಬೇಕು ಎಂದು ನಾನು ಕೋರುತ್ತೇನೆ. ಇನ್ನೂ ಹೋಳಿಯ ಸಂಭ್ರಮದಿಂದ ಯಾರಾದರೂ ಬಣ್ಣ ಹಚ್ಚಲು ಬಂದರೆ ಅವರೊಂದಿಗೆ ಮುಗುಳ್ನಕ್ಕು ಅದೇ ಸ್ನೇಹ, ಪ್ರೀತಿ ಹಾಗೂ ಗೌರವದಿಂದ ಅವರಿಗೆ ಹೋಳಿ ಮುಬಾರಕ್ ಅಂತ ಹಾರೈಸಿ ಎಂದು ಅವರು ಕರೆ ನೀಡಿದ್ದಾರೆ. ಅಂದಹಾಗೆ ಆಗಾಗ್ಗೆ ಹೋಳಿ ಹಬ್ಬ ಹಾಗೂ ಜುಮ್ಮಾ ಪ್ರಾರ್ಥನೆಗಳು ಒಂದೇ ದಿನ ಬರುತ್ತಿರುತ್ತವೆ. ಅದರಂತೆಯೇ ಈ ಬಾರಿಯು ಎರಡೂ ಒಟ್ಟಿಗೆ ಬಂದಿವೆ, ಇನ್ನೂ ನಮ್ಮ ಏಕತೆಯನ್ನು ಹಾಗೂ ಸಹಬಾಳ್ವೆಯನ್ನು ಗಟ್ಟಿಗೊಳಿಸಲು ಈ ಅವಕಾಶ ನಮಗೆ ಒಲಿದು ಬಂದಿದೆ ಎಂದು ಮೊಹಮ್ಮದ್ ಹನೀಫ್ ಕೋಮು ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಹಿಂದುಗಳಿಗೆ ಹೋಳಿಯ ಶುಭಾಶಯಗಳನ್ನೂ ಸಹ ಕೋರಿದ್ದಾರೆ.
ಹೋಳಿಗೆ ಅಡ್ಡಿ ಪಡಿಸುವವರಿಗೆ 3 ಆಯ್ಕೆ ನೀಡಿದ್ದ ಮಂತ್ರಿ..
ಇನ್ನೂ ಉತ್ತರ ಪ್ರದೇಶದಲ್ಲಿ ನಡೆಯುವ ಹೋಳಿ ಹಬ್ಬದ ಆಚರಣೆಯ ವೇಳೆ ಬಣ್ಣ ಮೈಗೆ ತಾಕಬಾರದೆಂದರೆ ಮುಸ್ಲಿಮರು ಟಾರ್ಪಲ್ ಹಾಕಿಕೊಂಡು ಶುಕ್ರವಾರದ ಪ್ರಾರ್ಥನೆಗೆ ಹೋಗಲಿ ಎಂದು ಅಲ್ಲಿನ ಸಚಿವ ರಘುರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಸನಾತನ ಧರ್ಮದವರಿಗೆ ಹೋಳಿ ಹಬ್ಬ ವರ್ಷಕ್ಕೆ ಒಂದು ಬಾರಿ ಬರುತ್ತದೆ. ಮಸೀದಿಗಳ ಸಮೀಪವಿರುವ ಕೆಲವು ನಿರ್ಬಂಧಿತ ಸ್ಥಳಗಳಲ್ಲಿ ಹೋಳಿ ಆಡಬಾರದು ಎಂದು ಅಪೇಕ್ಷಿಸುವುದು ಸರಿಯಲ್ಲ. ಈ ಹೋಳಿಯ ಆಚರಣೆಗೆ ಅಡಚಣೆ ಉಂಟು ಮಾಡುವವರಿಗೆ ನಮ್ಮಲ್ಲಿ ಮೂರು ಆಯ್ಕೆಗಳಿವೆ ಎಂದಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಜೈಲಿಗೆ ಹೋಗುವುದು, ರಾಜ್ಯ ತೊರೆಯುವುದು ಅಥವಾ ಯಮರಾಜನ ಬಳಿಗೆ ತೆರಳುವುದು ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇನ್ನೂ ಹೋಳಿ ಆಚರಣೆಗೆ ಬೇಕಾದ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋಮು ಉದ್ವಿಗ್ನತೆಯನ್ನು ತಪ್ಪಿಸಲು ಶಾಂತಿ ಸಮಿತಿ ಸಭೆಯನ್ನೂ ನಡೆಸಲಾಗಿದೆ ಎಂದು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
ಒಟ್ನಲ್ಲಿ.. ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಧರ್ಮಗುರುಗಳೇನೋ ಸೌಹಾದರ್ತೆಯ ನಡೆಯನ್ನು ಅನುಸರಿಸಲು ಮುಂದಾಗಿದ್ದಾರೆ. ಈ ಮೂಲಕ ಹಿಂದೂ- ಮುಸ್ಲಿಂರಲ್ಲಿ ಸಾಮರಸ್ಯದ ಬೀಜ ಬಿತ್ತಲು ಸಿದ್ದರಾಗಿ ಮೇಲ್ಪಂಕ್ತಿ ಹಾಕಲು ಮುಂದಾಗಿದ್ದಾರೆ. ಆದರೆ ತಮ್ಮ ರಾಜಕೀಯ ತೆವಲಿಗಾಗಿ ಕೋಮು ಸಂಘರ್ಷಕ್ಕೆ ಕಾರಣವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಸಚಿವನ ಮಾತಿನಿಂದ ಅಲ್ಲಿ ಇನ್ನಷ್ಟು ಕೋಮು ಗಲಭೆಗಳು ಸಂಭವಿಸದಿರಲಿ ಅನ್ನೊದೆ ನಮ್ಮ ಆಶಯ..