ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಶೇರ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವಾಗಿದೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿಜಯವಾಗಿದೆ. ಬಿಸಿಲು-ಮಳೆ-ಹಸಿವು-ಆರೋಗ್ಯವನ್ನು ಲೆಕ್ಕಿಸದೆ ದೆಹಲಿಯಲ್ಲಿ ಬೀಡುಬಿಟ್ಟು ಪೊಲೀಸರ ದೌರ್ಜನ್ಯದಿಂದಲೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತ ಹೋರಾಟವನ್ನು ನಡೆಸಿದ ಲಕ್ಷಾಂತರ ವಿದ್ಯಾರ್ಥಿ-ಯುವಜನರು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಶಿಕ್ಷಣ ಸಚಿವರ ರಾಜೀನಾಮೆಯಿಂದ ಶಿಕ್ಷಣ ಕ್ಷೇತ್ರದ ಸರ್ವ ಸಮಸ್ಯೆಗಳು ಪರಿಹಾರವಾಗಲಾರದು. ಸರ್ವಾಧಿಕಾರ ಮತ್ತು ದುರಾಡಳಿತದ ಶಾಲೆಯ ಗುರುಗಳು ಕುರ್ಚಿಯಲ್ಲಿ ಭದ್ರವಾಗಿ ಕುಳಿತಿರುವಾಗ ಇಂತಹ ಶಿಷ್ಯರ ನಿರ್ಗಮನದಿಂದ ಶಾಲೆಯ ಸುಧಾರಣೆಯಾಗಲಾರದು. ರಾಜಕೀಯದಿಂದ ಶಿಕ್ಷಣದ ವರೆಗೆ ಎಲ್ಲವನ್ನೂ ವ್ಯಾಪಾರೀಕರಣ ಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿಸುವ ವರೆಗೆ ಶಿಕ್ಷಣ ವ್ಯವಸ್ಥೆಯೂ ಸುಧಾರಣೆಯಾಗದು, ಭಾರತವೂ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲಾರದು.

ಈ ಹಿನ್ನೆಲೆಯಲ್ಲಿ ಒಬ್ಬ ಅಸಮರ್ಥ ಮತ್ತು ಭ್ರಷ್ಟ ಸಚಿವನ ರಾಜೀನಾಮೆಗಾಗಿ ಸಂಭ್ರಮಾಚರಣೆ ಮಾಡದೆ, ದೇಶದ ವಿದ್ಯಾರ್ಥಿ-ಯುವಜನರು ಕೇಂದ್ರದಲ್ಲಿರುವ ಅಸಮರ್ಥ ಮತ್ತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ವರೆಗೆ ವಿರಮಿಸಬಾರದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ಜನರ ಜೊತೆಗೆ ಇರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

About The Author