Koppala News: ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಸಿವಿಸಿ ಫೌಂಡೇಶನ್ ಆಶ್ರಯದಲ್ಲಿ ಕಾರ್ಗಿಲ್ ಯುದ್ಧದ 27ನೇ ವಾರ್ಷಿಕೋತ್ಸವದ ನೆನಪಿನಲ್ಲಿ ‘ವಿಜಯ್ ಅಮೃತ್ ಕಳಶ್’ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಈ ಸ್ಮರಣೀಯ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಶ್ರೀ ಮುತ್ತಣ್ಣ ಸರವಗೊಳ್ ಅವರು ಚಾಲನೆ ನೀಡಿದ ವಾಕಥಾನ್ ಮೂಲಕ ಕಳೆ ಗಟ್ಟಿತು. ಈ ವೇಳೆ ಶಾಲಾ-ಕಾಲೇಜು ವಿದ್ಯಾರ್ಥಿಗಳು 100 ಅಡಿ ಉದ್ದದ ಭವ್ಯ ರಾಷ್ಟ್ರಧ್ವಜವನ್ನು ಅತ್ಯಂತ ಉತ್ಸಾಹದಿಂದ ಕೈಯಲ್ಲಿ ಹಿಡಿದು ಅಶೋಕ ವೃತ್ತ, ಬಸ್ ನಿಲ್ದಾಣ ಹಾಗೂ ರೈಲ್ವೆ ಸೇತುವೆಯ ಮಾರ್ಗವಾಗಿ ಪಾನಘಂಟಿ ಕಲ್ಯಾಣ ಮಂಟಪದವರೆಗೆ ತಲುಪಿದ ದೃಶ್ಯವು ಇಡೀ ನಗರದಲ್ಲಿ ದೇಶಭಕ್ತಿಯ ಅಲೆಯನ್ನು ಎಬ್ಬಿಸಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವುದರ ಜೊತೆಗೆ, ದೇಶಕ್ಕಾಗಿ ಸೇವೆ ಸಲ್ಲಿಸಿದ 11 ಜನ ನಿವೃತ್ತ ಸೈನಿಕರನ್ನು ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಶ್ರೀ ವಿ. ಎಂ. ಭೂಸನೂರಮಠ, ರಾಘವೇಂದ್ರ ಪಾನಗಂಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ವಿಠಲ್ ಜಾಬಗೌಡರ, ವಿಜಯವಾಣಿ ಸ್ಥಾನಿಕ ಸಂಪಾದಕರಾದ ಶ್ರೀ ಜಗನ್ನಾಥ ದೇಸಾಯಿ, ಎಸ್.ವಿ.ಸಿ ಶಿಕ್ಷಣ ಸಂಸ್ಥೆಯ ಸಿಇಓ ಡಾ. ಜಗದೀಶ್ ಅಂಗಡಿ ಹಾಗೂ ನಿವೃತ್ತ ಸೈನಿಕ ಶ್ರೀ ಉಮೇಶ್ ಕಾಮನೂರ್ ಅವರುಗಳು ಭಾಗವಹಿಸಿ, ಯುದ್ಧದ ಭೀಕರತೆ, ಸೈನಿಕರ ಅಪ್ರತಿಮ ತ್ಯಾಗ ಮತ್ತು ದೇಶಪ್ರೇಮದ ಪ್ರಾಮುಖ್ಯತೆಯ ಕುರಿತು ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕೋರ್ ಕಮಿಟಿ ಸದಸ್ಯರು ಹಾಗೂ ಸಿವಿಸಿ ಫೌಂಡೇಶನ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ. ವಿ. ಚಂದ್ರಶೇಖರ ಅವರು ಕಾರ್ಗಿಲ್ ಯುದ್ಧದ ಐತಿಹಾಸಿಕ ಹಿನ್ನೆಲೆ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ನಮ್ಮ ಯೋಧರ ಮಹತ್ವದ ಪಾತ್ರವನ್ನು ಮನಮುಟ್ಟುವಂತೆ ವಿವರಿಸಿದರು.
ಈ ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರಿತರಾದ ಮಕ್ಕಳು ಹಾಗೂ ಯುವಜನತೆ ಭಾರತೀಯತೆ, ದೇಶಭಕ್ತಿ ಮತ್ತು ಸೈನ್ಯದ ಶೌರ್ಯದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ವಿವಿಧ ಪಕ್ಷಗಳ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ನಿವೃತ್ತ ಯೋಧರು ಹಾಗೂ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಆಚರಣೆಯನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದರು.




