Mumbai: ಮುಂಬೈನಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಗಳನ್ನು ಜನವರಿ 31ರವರೆಗೂ ಬಂದ್ ಮಾಡಿದ್ದಾರೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿ ಮುಂದುವರಿಯಲಿದೆ ಎಂದು ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ಅಧಿಕೃತ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಭಾನುವಾರ 11,877 ಹೊಸ ಕೋವಿಡ್ ಕೇಸ್ಗಳು ವರದಿಯಾಗಿದೆ. ಇದು ಶನಿವಾರ ವರದಿಯಾದ ಕೋವಿಡ್ ಕೇಸ್ಗಳಿಗಿಂತ 2707 ಹೆಚ್ಚು ಸಂಖ್ಯೆಯನ್ನು ಹೊಂದಿದೆ. ಅಲ್ಲದೇ 50 ಓಮಿಕ್ರಾನ್ ಪ್ರಕರಣಗಳು ಸಹ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 9 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದು ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 1,41,542 ಆಗಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ 42,204 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ವರದಿಯಾದ 11,877 ಕೊರೊನಾ ಪ್ರಕರಣಗಳಲ್ಲಿ 7792 ಪ್ರಕರಣಗಳು ಮುಂಬೈನಲ್ಲೇ ವರದಿಯಾಗಿದೆ.