ನವದೆಹಲಿ : ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿ ನನ್ನ ಜೊತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ಗಂಟೆಗಳ ಕಾಲ ಸುದೀರ್ಘ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಯುದ್ಧ ಪೀಡಿತ ಉಭಯ ದೇಶಗಳ ನಾಯಕರು ಕದನ ವಿರಾಮದ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಾನು ನಡೆಸಿರುವ ಮಾತುಕತೆಯಲ್ಲಿ ಯುದ್ಧ ನಿಲ್ಲುವ ಆಶಾಭಾವನೆ ವ್ಯಕ್ತವಾಗಿದೆ..
ಪುಟಿನ್ ಅವರೊಂದಿಗೆ ಮಾತುಕತೆಯ ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ನಾನು ನಡೆಸಿರುವ ಮಾತುಕತೆಯಲ್ಲಿ ಯುದ್ಧ ನಿಲ್ಲುವ ಆಶಾಭಾವನೆ ವ್ಯಕ್ತವಾಗಿದ್ದು, ನಾನು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದೇನೆ ಅಂತ ಪುಟಿನ್ ನನಗೆ ತಿಳಿಸಿದ್ದಾರೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ವ್ಲಾಡಿಮಿರ್ ಪುಟಿನ್ ಎಂಬ ಒಳ್ಳೆಯ ಸಂಭಾವಿತ ವ್ಯಕ್ತಿಯೊಂದಿಗಿನ ಸಣ್ಣ ಸಂಭಾಷಣೆಯನ್ನು ನಾವು ಉತ್ತಮವಾಗಿ ನಡೆಸಿದ್ದೇವೆ. ಇದರಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಪ್ರತಿ ವಾರ ಸರಾಸರಿ 5,000 ಯುವ ಸೈನಿಕರು ಕೊಲ್ಲಲ್ಪಡುತ್ತಿದ್ದಾರೆ. ಅಲ್ಲದೆ ಪಟ್ಟಣಗಳಲ್ಲಿ ಬಲಿಯಾಗುತ್ತಿರುವ ಜನರಿಗಿಂತ ಇದು ಬಹುಶಃ ಕೆಟ್ಟದಾಗಿದೆ ಅವರು ಹೇಳಿದ್ದಾರೆ.
ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ
ಹತ್ಯೆಗಳನ್ನು ಮತ್ತಷ್ಟು ನಿಲ್ಲಿಸಲು ಮತ್ತು ಮೂರು ವರ್ಷಗಳ ಯುದ್ಧವನ್ನು ತಕ್ಷಣ ಕೊನೆಗೊಳಿಸಲು ಅಮೆರಿಕ ಆಡಳಿತವು ತೀವ್ರ ಆಸಕ್ತಿ ಹೊಂದಿದೆ. ನಾವು ಯುದ್ಧವನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ಇದು ಸಂಪೂರ್ಣ ರಕ್ತಪಾತ. ನಾನು ತುಂಬಾ ಕೆಟ್ಟದಾದ, ಭಯಾನಕವಾದ ಉಪಗ್ರಹ ಚಿತ್ರಗಳನ್ನು ನೋಡಿದ್ದೇನೆ… ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಇದು ನಮ್ಮ ಯುದ್ಧವಲ್ಲ. ನಾವು ಹಿಂದಿನ ಆಡಳಿತದಿಂದ ಏನನ್ನಾದರೂ ಮಾಡುತ್ತಿದ್ದೇವೆ. ಆದರೆ ಆ ಸರ್ಕಾರ ಹೀಗೆ ಯುದ್ಧ ಸಂಭವಿಸಲು ಹೇಗೆ ಅವಕಾಶ ನೀಡಿದರು? ಒಂದು ವೇಳೆ ಮನಸ್ಸು ಮಾಡಿದ್ದರೆ ಈ ಸಂಘರ್ಷವನ್ನು ತಡೆಯಲು ಸಾಧ್ಯವಿತ್ತು ಎಂದು ಅಮೆರಿಕದ ಕಳೆದ ಸರ್ಕಾರದ ವಿರುದ್ಧ ಟ್ರಂಪ್ ಕಿಡಿ ಕಾರಿದ್ದಾರೆ.
ಸಮ್ಮತಿ ಪತ್ರವನ್ನು ರೂಪಿಸಲು ರಷ್ಯಾ ಸಿದ್ಧವಾಗಿದೆ..
ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಪುಟಿನ್, ಮಾಸ್ಕೋ ಹಾಗೂ ಕೀವ್ ನಡುವಿನ ನೇರ ಮಾತುಕತೆಯನ್ನು ಪುನರಾರಂಭಿಸಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಟ್ರಂಪ್ ಎಂದು ಅವರು ಕೃತಜ್ಞತೆ ತಿಳಿಸಿದ್ದಾರೆ. ಇನ್ನೂ ಉಕ್ರೇನ್ ಜೊತೆಗೆ ಭವಿಷ್ಯದ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಒಂದು ಸಮ್ಮತಿ ಪತ್ರವನ್ನು ರೂಪಿಸಲು ರಷ್ಯಾ ಸಿದ್ಧವಾಗಿದೆ. ರಷ್ಯಾ ಹಾಗೂ ಉಕ್ರೇನ್ ಎರಡೂ ಕಡೆಯವರು ಒಪ್ಪಿಕೊಳ್ಳಲು ಅರ್ಹತೆಯನ್ನು ಪಡೆದ ರಾಜಿ ಸಂಧಾನಕ್ಕೆ ಮುಂದಾಗಬೇಕು. ಈ ವಿಚಾರದಲ್ಲಿ ಉಕ್ರೇನ್ ಕೂಡ ಸೂಕ್ಷ್ಮವಾಗಿ ಸ್ಪಂದಿಸಿದರೆ ಕದನ ವಿರಾಮ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಇನ್ನೂ ಬಹುಮುಖ್ಯವಾಗಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ರಷ್ಯಾ – ಉಕ್ರೇನ್ ನಡುವಿನ ಯುದ್ಧವನ್ನು ತಣಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈವರೆಗಿನ 3 ವರ್ಷದ ಯುದ್ಧಕ್ಕೆ ಸುಮಾರು 8 ಲಕ್ಷ ಜನರು ಬಲಿಯಾಗಿದ್ದಾರೆ.
ಸುದೀರ್ಘ ಯುದ್ಧದಿಂದ ಇಬ್ಬರು ನಾಯಕರು ಹತಾಶೆಗೊಂಡಿದ್ದಾರೆ
ಕದನ ವಿರಾಮ ಸಂಬಂಧ ಎಲ್ಲಿ, ಯಾವಾಗ ಮತ್ತು ಯಾವ ಸ್ಥಳದಲ್ಲಿ ಮಾತುಕತೆ ನಡೆಯಲಿದೆ. ಹಾಗೂ ಯಾರು ಭಾಗಿಯಾಗಲಿದ್ದಾರೆ ಎಂಬ ಕುರಿತು ಸ್ಪಷ್ಟತೆ ಇಲ್ಲ. 2022 ರ ನಂತರ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮೊದಲ ನೇರ ಮಾತುಕತೆಯ ಕೆಲವು ದಿನಗಳ ನಂತರ ಟ್ರಂಪ್ ಅವರ ಘೋಷಣೆ ಹೊರಬಿದ್ದಿದೆ. ಕಳೆದ ಶುಕ್ರವಾರ ಟರ್ಕಿಯಲ್ಲಿ ನಡೆದ ಮಾತುಕತೆ ಕೇವಲ ಸೀಮಿತ ಪ್ರಮಾಣದ ಕೈದಿಗಳ ವಿನಿಮಯ ಕುರಿತು ಆಗಿದ್ದು, ಯುದ್ಧ ನಿಲ್ಲಿಸುವ ಕುರಿತು ಆಗಿಲ್ಲ.
ಸುದೀರ್ಘ ಯುದ್ಧದಿಂದ ಇಬ್ಬರು ನಾಯಕರು ಹತಾಶೆಗೊಂಡಿದ್ದಾರೆ ಎಂದು ಟ್ರಂಪ್ ಈ ಕರೆಗೆ ಮುನ್ನ ತಿಳಿಸಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಯುದ್ಧ ನಿಲ್ಲಿಸುವ ಆಸಕ್ತಿ ಹೊಂದಲಿ ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ಅವರು ಈ ಬಗ್ಗೆ ಆಸಕ್ತಿ ಇಲ್ಲವಾದಲ್ಲಿ ಅಮೆರಿಕ ಈ ಪ್ರಯತ್ನದಿಂದ ದೂರ ಉಳಿಯಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಿಳಿಸಿದ್ದಾರೆ. ಆದರೆ 2022ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ದ ಕೊನೆಗೊಳಿಸಲು ಟ್ರಂಪ್ ಹರಸಾಹಸ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಈ ಸಂಘರ್ಷ ಕೊನೆಗಾಣಿಸುವುದಾಗಿ ನೀಡಿದ್ದ ಭರವಸೆಯಲ್ಲಿ ಟ್ರಂಪ್ಗೆ ಹಿನ್ನಡೆಯಾಗಿದೆ.