Sunday, April 20, 2025

Latest Posts

ಮಹಾಕುಂಭಮೇಳಕ್ಕೆ ಹೋಗಲು ಹುಬ್ಬಲ್ಳಿಯಿಂದ ವಿವಿಧ ಮಾದರಿ ಬಸ್ ಬಿಡುಗಡೆ

- Advertisement -

Hubli News: ಹುಬ್ಬಳ್ಳಿ: ಉತ್ತರ ಪ್ರದೇಶದ ಪ್ರಯಾಗರಾಜ್​​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುವ ಯಾತ್ರಿಗಳ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಾಸಂಗಿಕ ಕರಾರಿನ ಮೇರೆಗೆ ವಿವಿಧ ಮಾದರಿಯ ಬಸ್​​​ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಐತಿಹಾಸಿಕ ಮಹಾಕುಂಭ ಮೇಳಕ್ಕೆ ಹುಬ್ಬಳ್ಳಿ ವಿಭಾಗದಿಂದ 3 ಸ್ಲೀಪರ್ ಬಸ್​​ಗಳು, 90 ಯಾತ್ರಿಗಳೊಂದಿಗೆ ಶನಿವಾರ ಪ್ರಯಾಗರಾಜ್ ಕಡೆಗೆ ಪ್ರಯಾಣ ಬೆಳೆಸಿವೆ. ಒಟ್ಟು 10 ದಿನಗಳ ಪ್ರವಾಸ ಇದಾಗಿದ್ದು, ಯಾತ್ರಿಗಳು ಮಾರ್ಗ ಮಧ್ಯದಲ್ಲಿ ನಾಸಿಕ್, ಓಂಕಾರೇಶ್ವರ, ಉಜ್ಜಯಿನಿ, ಚಿತ್ರಕೂಟ, ಅಯೋಧ್ಯಾ, ಕಾಶಿ, ಔರಂಗಾಬಾದ್, ಅಕ್ಕಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟು ಅಂದಾಜು 4,500 ಕಿ.ಮೀ. ಪ್ರಯಾಣ ಮಾಡಲಿದ್ದಾರೆ.

ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ಮಾಹಿತಿ ನೀಡಿ, ”ಮೊದಲ ಹಂತದ 3 ನಾನ್ ಎಸಿ ಸ್ಲೀಪರ್ ಬಸ್​​ಗಳು ಪ್ರವಾಸ ಆರಂಭಿಸಿವೆ. ತೊಂದರೆ ಮುಕ್ತ ಸುಗಮ ಪ್ರಯಾಣಕ್ಕಾಗಿ ಪ್ರತಿ ಬಸ್ಸಿಗೆ ಇಬ್ಬರು ಹಿರಿಯ ಚಾಲಕರನ್ನು ಹಾಗೂ ನಿರ್ವಹಣೆಗಾಗಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಹೇಳಿದರು.

ಮಹಾಕುಂಭ ಮೇಳಕ್ಕೆ ರಾಜ್ಯದ ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ತೆರಳುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಪ್ರಾಸಂಗಿಕ ಕರಾರಿನ ಮೇರೆಗೆ ಮಲ್ಟಿ ಆ್ಯಕ್ಸಲ್ ಎಸಿ ವೋಲ್ವೊ, ನಾನ್ ಎಸಿ, ಪಲ್ಲಕ್ಕಿ, ಸ್ಲೀಪರ್, ಮುಂತಾದ ಐಷಾರಾಮಿ ಹಾಗೂ ವೇಗದೂತ ವಿಶೇಷ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳ ಪ್ರವಾಸಕ್ಕಾಗಿ ದೂರದ ವಿಜಯಪುರ ಜಿಲ್ಲೆಯ ತಾಳಿಕೋಟೆ ಸೇರಿದಂತೆ ವಿವಿಧ ಸ್ಥಳಗಳಿಂದ ವೋಲ್ವೊ, ಪಲ್ಲಕ್ಕಿ ಮತ್ತಿತರ ವಿವಿಧ ಮಾದರಿಯ ಬಸ್​​ಗಳಿಗೆ ಬೇಡಿಕೆ ಬರುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಡಿಪೋ ಮ್ಯಾನೇಜರ್ (77609 91674) ಅಥವಾ ಗೋಕುಲ ರಸ್ತೆ ಬಸ್ ನಿಲ್ದಾಣಾಧಿಕಾರಿಯನ್ನು (77609 91682) ಸಂಪರ್ಕಿಸಬಹುದಾಗಿದೆ” ಎಂದು ರಾಮನಗೌಡರ ತಿಳಿಸಿದ್ದಾರೆ.

ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್. ಗುಡೆಣ್ಣವರ, ಸಹಾಯಕ ಲೆಕ್ಕಾಧಿಕಾರಿ ಸುನಿಲ ವಾಡೇಕರ, ಡಿಪೋ ಮ್ಯಾನೇಜರ್ ದೀಪಕ ಜಾದವ್, ವಿರುಪಾಕ್ಷಿ ಹಟ್ಟಿ, ದಾವಲಸಾಬ ಬೂದಿಹಾಳ ಮತ್ತು ಘಟಕದ ಸಿಬ್ಬಂದಿ ಉಪಸ್ಥಿತರಿದ್ದು, ಯಾತ್ರಿಗಳಿಗೆ ಶುಭ ಹಾರೈಸಿ ವಿಶೇಷ ಬಸ್​​ಗಳನ್ನು ಕಳುಹಿಸಲಾಯಿತು.

- Advertisement -

Latest Posts

Don't Miss