Wednesday, October 15, 2025

Latest Posts

ಸಭೆಯಲ್ಲಿ ಸೂರ್ಜೇವಾಲ ಮತ್ತು ಸತೀಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಮಾತಿನ ಜಟಾಪಟಿ

- Advertisement -

Belagavi News: ಬೆಳಗಾವಿ: ಬೆಳಗಾವಿಯಲ್ಲಿ ಸದ್ಯದಲ್ಲೇ ನಡೆಯಲಿರುವ 1924ರ ಎಐಸಿಸಿ ಅಧಿವೇಶನದ ನೂರು ವರ್ಷಗಳ ನೆನಪಿನ ಅಂಗವಾಗಿ, ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಎಂಬ ಸಮ್ಮೇಳನ ನಡೆಯಲಿದೆ. ಜ. 17ರಂದು ಅದರ ಪೂರ್ವಭಾವಿ ಸಭೆ ನಡೆಯಿತು. ಆ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲಾ ನಡುವೆ ಮಾತಿನ ಚಕಮಕಿ ನಡೆಯಿತು.

ಸಭೆಯಲ್ಲಿ ಸುರ್ಜೇವಾಲಾ ಮಾತನಾಡುತ್ತಿದ್ದಂತೆ, ಸಭಿಕರಲ್ಲಿ ಕುಳಿತಿದ್ದ ಸತೀಶ್ ಜಾರಕಿಹೊಳಿಯವರ ಬೆಂಬಲಿಗರು ಎದ್ದು ನಿಂತು ಸುರ್ಜೇವಾಲಾರವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ಎಲ್ಲಾ ನಾಯಕರು ಸಮಾವೇಶವನ್ನು ಯಶಸ್ವಿಗೊಳಿಸಬೇಕು. ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಸಮ್ಮೇಳನಕ್ಕೆ ಕರೆತರಬೇಕು ಎಂದು ಕರೆ ಕೊಟ್ಟರು.

ಆಗ, ಸಭಿಕರಲ್ಲಿದ್ದ ಸ್ಥಳೀಯ ಕಾಂಗ್ರೆಸ್ ನಾಯಕ ಬಾಬುಲಾಲ್ ಭಗವಾನ್, “ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಿದ್ದು ಸತೀಶ್ ಜಾರಕಿಹೊಳಿ. ವಿದ್ಯುತ್ ಶುಲ್ಕ ಸೇರಿದಂತೆ ಭವನಕ್ಕೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ನಿರ್ವಹಿಸುತ್ತಿರುವವರು ಅವರೇ. ಇದಕ್ಕೆ ಕಾಂಗ್ರೆಸ್ಸಿನಲ್ಲಿ ಈಗಿರುವ ಘಟಾನುಘಟಿ ನಾಯಕರ ಕೊಡುಗೆ ಏನಿದೆ ಎಂದು ಕೇಳಿದರು. ಅವರ ಪ್ರಶ್ನೆ ಪರೋಕ್ಷವಾಗಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧವೇ ಆಗಿತ್ತೆಂಬುದು ಅಲ್ಲಿ ನೆರೆದಿದ್ದ ಎಲ್ಲರಿಗೂ ಗೊತ್ತಾಯಿತು.

ತಮ್ಮ ಮಾತು ಮುಂದುವರಿಸಿದ ಅವರು, ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ಬಿಟ್ಟರೆ ಕಾಂಗ್ರೆಸ್ಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಾರೂ ಹಣ ಖರ್ಚು ಮಾಡುವುದಿಲ್ಲ ಎಂದರಲ್ಲದೆ, ಈ ಸಭೆಗೆ ಜಿಲ್ಲಾ ಕಾಂಗ್ರೆಸ್ ಶಾಸಕರು ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಆಗ, ಮಧ್ಯಪ್ರವೇಶಿಸಿದ ಸುರ್ಜೇವಾಲಾ, “ನಾವೀಗ ಸಮಾರಂಭದ ಯಶಸ್ಸಿಗಾಗಿ ಹೇಗೆ ಪ್ರಯತ್ನಿಸಬೇಕು ಎಂಬುದರ ಬಗ್ಗೆ ಚರ್ಚಿಸಲು ಸೇರಿದ್ದೇವೆ. ಈಗ ಅದರ ಬಗ್ಗೆ ಮಾತನಾಡೋಣ‘’ ಎಂದು ಹೇಳಿದರು. ಆದರೆ, ಇದಕ್ಕೆ ಬಾಬೂಲಾಲ್ ಸುಮ್ಮನಾಗಲಿಲ್ಲ. ತಮ್ಮ ಮಾತುಗಳನ್ನು ಮುಂದುವರಿಸಿದರು. ಬಾಬುಲಾಲ್ ಅವರ ಮಾತಿಗೆ ಸಭೆಯಲ್ಲಿದ್ದ ಇತರ ಜಾರಕಿಹೊಳಿ ಬೆಂಬಲಿಗರು ದನಿಗೂಡಿಸಿದರು.

ಆಗ, ಮತ್ತೆ ಮಧ್ಯೆ ಪ್ರವೇಶಿಸಿದ ಸುರ್ಜೇವಾಲ, “ನೀವೆಲ್ಲಾ ಸತೀಶ್ ಅವರನ್ನು ಖುಷಿಪಡಿಸಲು ಹೀಗೆ ಹೇಳುತ್ತಿದ್ದೀರಿ’’’ ಎಂದರು. ಆಗ ಸಿಟ್ಟಿಗೆದ್ದ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ, “ಸತೀಶ್ ಜಾರಕಿಹೊಳಿಗಾಗಿ ನಾವು ಜೀವ ನೀಡಲೂ ತಯಾರಾಗಿದ್ದೇವೆ. ನಾವೆಲ್ಲಾ ಇಲ್ಲಿಗೆ ಅವರ ಸಲುವಾಗಿ ಬಂದಿದ್ದೇವೆ’’ ಎಂದರು.ಈ ಮಾತುಗಳಿಂದ ಪ್ರೇರಿತರಾದ ಹಲವಾರು ಮಂದಿ ಜಾರಕಿಹೊಳಿಯವರ ಬಗ್ಗೆ ತಮ್ಮ ಮಾತುಗಳನ್ನು ಮುಂದುವರಿಸಿದರು.

ಬಿಜೆಪಿ ಲೇವಡಿ
ಕಾಂಗ್ರೆಸ್ಸಿನಲ್ಲಿ ಭುಗಿಲೆದ್ದಿರುವ ಬಣಗಳ ಕಿತ್ತಾಟ ಬೀದಿಗೆ ಬಂದಿದೆ ಎಂದು ಜೆಡಿಎಸ್ ಹಾಗೂ ಬಿಜೆಪಿ ಲೇವಡಿ ಮಾಡಿವೆ. ಬಿಜೆಪಿಯು ತನ್ನ ಟ್ವೀಟ್ ನಲ್ಲಿ, “ಬೆಳಗಾವಿಯಲ್ಲಿ ಸ್ವಲ್ಪದರಲ್ಲಿಯೇ ಧರ್ಮದೇಟುಗಳಿಂದ ಬಚಾವ್‌ ಆಗಿರುವ ಸುರ್ಜೇವಾಲ ಅವರು ಮುಂದಿನ ಸಭೆಗಳಿಗೆ ಕರ್ನಾಟಕಕ್ಕೆ ಬರುವ ಮುನ್ನ ಹೆಚ್ಚಿನ ಭದ್ರತೆಗೆಂದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಆರ್‌ಪಿಎಫ್)‌ಯಿಂದ ಒಂದು ತುಕಡಿಯ ಜೊತೆ ಬರುವುದು ಉತ್ತಮ!’’ ಎಂದಿದೆ.

ಕುರ್ಚಿ ಕಿತ್ತಾಟ ಎಂದ ಜೆಡಿಎಸ್
ಜೆಡಿಎಸ್ ತನ್ನ ಟ್ವೀಟ್ ನಲ್ಲಿ, “ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಡಿಶುಂ ಡಿಶುಂ !’’ ಎಂಬ ಶೀರ್ಷಿಕೆಯಡಿ, “ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ಬಹಿರಂಗ ಸಮರ ಏರ್ಪಟ್ಟಿದೆ. ಬೆಳಗಾವಿಯ ಸಭೆಯಲ್ಲಿ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿ ಬೆಂಬಲಿಗರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಗೆ ಧಮ್ಕಿ ಹಾಕಿದ್ದು, ಏರು ಧ್ವನಿಯಲ್ಲಿ ಕೂಗಾಡಿ ಆಕ್ರೋಕ ಹೊರಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ “ಕುರ್ಚಿ ಕಿತ್ತಾಟ” ಒದ್ದು ಕಿತ್ತುಕೊಳ್ಳುವ ಹಂತಕ್ಕೆ ತಲುಪಿದೆ. ಒಡೆದ‌ ಹೋಳಾಗಿರುವ ರಾಜ್ಯ ಕಾಂಗ್ರೆಸ್ ನಾಯಕರ ಬಣಗಳ ಜಗಳ ಬೀದಿಗೆ ಬಂದಿದೆ’’ ಎಂದು ಹೇಳಿದೆ.

ಡಿಸಿಎಂ ಡಿಕೆ ಶಿವಕುಮಾರ್ ಅವರ ಪರ ಬ್ಯಾಟಿಂಗ್‌ ಮಾಡಲು ಬಂದು ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಎಸೆದ ಬೀಮರ್‌ಗಳಿಂದ ಸ್ವಲ್ಪದರಲ್ಲಿಯೇ ಬಚಾವ್‌ ಆಗಿರುವ ಸುರ್ಜೆವಾಲಾ ಅವರು ಮುಂದೇನು ಮಾಡುತ್ತಾರೆ ಎಂಬುದು ಸದ್ಯದ ಮಟ್ಟಿಗಿನ ಕುತೂಹಲ!! ಒಟ್ಟಿನಲ್ಲಿ ಈ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಎಂಬ ಈ #ಕೈಕಚ್ಚಾಟ ದಲ್ಲಿ ಇನ್ನಷ್ಟು ಹೊಡಿ-ಬಡಿ-ಕಡಿಗಳು ನಡೆದರೂ ಅಚ್ಚರಿಯಿಲ್ಲ!!’’ ಎಂದು ಹೇಳಿದೆ

- Advertisement -

Latest Posts

Don't Miss