ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ನಾಳೆಯಿಂದ ಆರಂಭವಾಗಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನೆಟ್ಸ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಲಯ ಕಳೆದುಕೊಂಡಿದ್ದಾರೆ. ಮೂರು ವರ್ಷಗಳಿಂದ ಶತಕ ಸಿಡಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ ವೈಫಲ್ಯ ಅನುಭವಿಸಿದರು. ವಿರಾಟ್ ಕೊಹ್ಲಿ ಇತ್ತಿಚೆಗೆ ವೆಸ್ಟ್‍ಇಂಡೀಸ್ ಹಾಗೂ ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿದ್ದರು.
ಆ.28ರಂದು ಬದ್ಧ ವೈರಿ ಪಾಕಿಸ್ಥಾನ ವಿರುದ್ಧ ಭಾರತ ತಂಡ ಮೊದಲ ಪಂದ್ಯ ಆಡಲಿದೆ. ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ಗಮನ ಕೇಂದ್ರಿತವಾಗಿದೆ. ಬುಧವಾರ ಎಲ್ಲಾ ಆಟಗಾರರಿಗಿಂತ ಹೆಚ್ಚಾಗಿ ವಿರಾಟ್ ನೆಟ್ಸ್‍ನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಸ್ಪಿನ್ನರ್‍ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಚೆಂಡನ್ನು ಸಿಕ್ಸರ್‍ಗೆ ಅಟ್ಟಿದರು. ಹಂಗಾಮಿ ತರಬೇತುದಾರ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ಅಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಪಾಕ್ ತಂಡದಿಂದ ಕಠಿಣ ಅಭ್ಯಾಸ
ಇದೇ ವೇಳೆ ಪಾಕಿಸ್ಥಾನ ತಂಡ ಕೂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಪಾಕ್ ನಾಯಕ ಬಾಬರ್ ಅಜಂ ಒಳ್ಳೆಯ ಲಯದಲ್ಲಿದ್ದು ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ.
ಟಿ 20 ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಭಾರತ -ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿ ಉಭಯ ತಂಡಗಳ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗು ಶಾಹೀನ್ ಅಫ್ರೀದಿ ಆಡುತ್ತಿಲ್ಲ . ಆದರೂ ಬದ್ಧ ವೈರಿಗಳ ಕಾದಾಟವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ.