Political News: ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಖರ್ಗೆ, ಪ್ರಿಯಾಂಕಾ ಗಾಂಧಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ಸಿಗರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಾತ್ಮ ಗಾಂಧೀಜಿ ಅವರು ಭಾರತದ ಆತ್ಮ. ಗಾಂಧೀಜಿ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ ಆದರೆ, ಅವರ ಆದರ್ಶಗಳು, ಸಿದ್ಧಾಂತಗಳು ಇನ್ನೂ ಕೂಡ ಜೀವಂತವಾಗಿವೆ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂಬುದು ಭಾರತದ ಶಕ್ತಿ ಮಂತ್ರಗಳು ಎಂದು ಡಿಸಿಎಂ ಹೇಳಿದರು.
ಗಾಂಧಿ ಭಾರತ ಎಂದರೆ ಸ್ವಾಭಿಮಾನದ ಭಾರತ, ಏಕತೆಯ ಭಾರತ, ಸಾಮರಸ್ಯದ ಭಾರತ, ಜಾತ್ಯಾತೀತ ಭಾರತ, ಸರ್ವೋದಯ ಭಾರತ. ವಿಶ್ವಕ್ಕೆ ಶಾಂತಿ ಸಹಬಾಳ್ವೆಯ ಸಂದೇಶ ಕೊಟ್ಟಿದ್ದು ನಮ್ಮ ಮಹಾತ್ಮ ಗಾಂಧೀಜಿಯವರು. ಗಾಂಧೀಜಿಯವರು ಸ್ವಾತಂತ್ರ್ಯ ತಂದುಕೊಟ್ಟರೆ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶಕ್ಕೆ ವರದಾನವಾಯಿತು. ಸಂವಿಧಾನವೇ ನಮ್ಮ ತಂದೆ-ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ, ಸಂವಿಧಾನವೇ ನಮ್ಮ ಗ್ರಂಥ. ಜೈ ಭೀಮ್ ಮೂಲಕ ನಮ್ಮ ನಡುವೆ ಜೀವಂತವಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು ಎಂದು ಡಿಕೆಶಿ ಹೇಳಿದರು.
ಸತ್ಯದ ಹಾದಿಯಲ್ಲಿ ನಡೆದ ಮಹಾತ್ಮನ ವಿರುದ್ಧವೇ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಗಾಂಧೀಜಿಯವರ ಚಿಂತನೆ ಉಳಿಯಬೇಕಾಗಿದೆ. ಗೋಡ್ಸೆ ಚಿಂತನೆಯನ್ನು ನಾವೆಲ್ಲಾ ಸೇರಿ ನಾಶ ಮಾಡಬೇಕಿದೆ. ಗಾಂಧೀಜಿಯವರ ತತ್ವಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದು ತಿಳಿಸಿದೆ. ಅಲ್ಲದೇ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ದೇಶದ ಮೂಲೆ ಮೂಲೆಯಲ್ಲೂ ನಡೆಸಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಡಿಸಿಎಂ ಡಿಕೆಶಿ ಮನವಿ ಮಾಡಿದರು.