ನವದೆಹಲಿ : ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳನ್ನು ಪರಿಹರಿಸಲು ಅಮೆರಿಕ ನಾಯಕತ್ವ ಏಕಕಾಲದಲ್ಲಿ ಶ್ರಮಿಸುತ್ತಿರುವುದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸುವಂತೆ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ರಿಜ್ವಾನ್ ಸಯೀದ್ ಶೇಖ್ ಒತ್ತಾಯಿಸಿದ್ದಾರೆ.
ಈ ಕುರಿತು ಅಮೆರಿಕದಲ್ಲಿ ಸಂದರ್ಶನವೊಂದರಲ್ಲಿ ಹೇಳಿರುವ ಶೇಖ್, ಈ ಆಡಳಿತದ ಅವಧಿಯಲ್ಲಿ ವಿಶ್ವ ಶಾಂತಿಗಾಗಿ ನಿಲ್ಲುವ, ಶಾಂತಿಪ್ರಿಯರಾಗಿ ಪರಂಪರೆಯನ್ನು ಸ್ಥಾಪಿಸುವ ಅಥವಾ ಯುದ್ಧಗಳನ್ನು ಕೊನೆಗೊಳಿಸಿದ, ಸಂಘರ್ಷಗಳ ನಿವಾರಣೆಯಲ್ಲಿ ಪಾತ್ರ ವಹಿಸುವ ದಕ್ಷ ಅಧ್ಯಕ್ಷರು ನಮ್ಮ ನಡುವೆ ಇದ್ದಾರೆ. ಈ ಆಡಳಿತದ ಅವಧಿಯಲ್ಲಿ ವಿಶ್ವ ಶಾಂತಿಗಾಗಿ ನಿಲ್ಲುವುದು ಅಧ್ಯಕ್ಷರ ಸ್ಪಷ್ಟ ಉದ್ದೇಶವಾಗಿದೆ. ಕಾಶ್ಮೀರ ಸಮಸ್ಯೆಗಿಂತ ಇನ್ನೊಂದು ಸಮಸ್ಯೆ ಪ್ರಸ್ತುತ ಜಗತ್ತಿನ ಮುಂದಿಲ್ಲ ಎಂದು ಟ್ರಂಪ್ ಉಲ್ಲೇಖಿಸಿ ಹೇಳಿದ್ದಾರೆ.
ಟ್ರಂಪ್ ಆಡಳಿತ ಪರಿಣಾಮಕಾರಿ ಹೆಜ್ಜೆ ಇಡಲಿ..
ನಾವು ಪರಮಾಣು ಸಾಮರ್ಥ್ಯವಿರುವ ನೆರೆಹೊರೆಯ ಒಂದು ಅಥವಾ ಎರಡು ದೇಶಗಳ ಬಗ್ಗೆ ಮಾತನಾಡುತ್ತಿಲ್ಲ. ಆದ್ದರಿಂದ ಪಾಕಿಸ್ತಾನ ಮತ್ತು ಭಾರತ ನಡುವೆ ಭುಗಿಲೆದ್ದಿರುವ ಬಿಕ್ಕಟ್ಟುಗಳನ್ನು ಶಮನಗೊಳಿಸಲು ಅಮೆರಿಕದ ಹಿಂದಿನ ಪ್ರಯತ್ನಗಳಿಗಿಂತ ಟ್ರಂಪ್ ಆಡಳಿತವು ಹೆಚ್ಚು ಸಮಗ್ರ ಮತ್ತು ನಿರಂತರ ಪರಿಣಾಮಕಾರಿ ಹೆಜ್ಜೆಗಳನ್ನು ಇಡುವ ಅಗತ್ಯವಿದೆ ಎಂದು ಶೇಖ್ ತಿಳಿಸಿದ್ದಾರೆ.
ಶಾಶ್ವತ ಪರಿಹಾರ ನೀಡಿ..
ನಾವು ಎದುರಿಸುತ್ತಿರುವ ಈ ಬೆದರಿಕೆಯೊಂದಿಗೆ, ತಕ್ಷಣಕ್ಕೆ ಉಲ್ಬಣಗೊಳ್ಳುವ ಕ್ರಮ ಅಥವಾ ಬಿಕ್ಕಟ್ಟಿನ ವಿಧಾನವನ್ನು ಗಮನಿಸುವು ಮೂಲಕ ಪರಿಸ್ಥಿತಿಯನ್ನು ಪರಿಹರಿಸಲು ಒಂದು ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಪರಿಸ್ಥಿತಿ ಶಮನಗೊಳ್ಳಲು ಮತ್ತು ಎರಡೂ ಕಡೆಗಳಿಂದ ಭವಿಷ್ಯದಲ್ಲಿ ಮುಂದೆ ಯಾವುದೇ ತೊಂದರೆಯಾಗದಂತೆ ಅವಕಾಶ ನೀಡುವ ಉದ್ಭವಿಸಲು ಬಿಡುವ ಬದಲು ಕಾಶ್ಮೀರ ವಿವಾದಕ್ಕೆ ದೀರ್ಘಕಾಲಿಕವಾಗಿರುವಂತೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕಿದೆ ಎಂದು ಶೇಖ್ ಪ್ರತಿಪಾದಿಸಿದ್ದಾರೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ತೊಂದರೆಗಳಿಗೆ ಕಾಶ್ಮೀರ ಸಮಸ್ಯೆಯೇ ಮೂಲ ಕಾರಣ ಎಂದು ಒತ್ತಿ ಹೇಳಿದ್ದಾರೆ.
ಉಭಯ ನಾಯಕರೊಂದಿಗೆ ಮಾತನಾಡಿದ ರುಬಿಯೊ..
ಇನ್ನೂ 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕವು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಮಾತನಾಡಿ, ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಯ ತನಿಖೆಯಲ್ಲಿ ಪಾಕಿಸ್ತಾನದ ಸಹಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ಈ ವಿಚಾರದಲ್ಲಿ ಟ್ರಂಪ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಎರಡೂ ದೇಶಗಳು ನನಗೆ ಹತ್ತಿರವಾಗಿವೆ, ಅವರ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಯಾಕೆಂದರೆ ಆ ಇಬ್ಬರು ನಾಯಕರನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಈ ವಿಚಾರದಲ್ಲಿ ಅವರವರೇ ನೋಡಿಕೊಳ್ಳುತ್ತಾರೆ ಎನ್ನುವ ಮೂಲಕ ತಮ್ಮ ಮಧ್ಯೆಪ್ರವೇಶದ ಬಗ್ಗೆ ಟ್ರಂಪ್ ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೇವಲ ಸರ್ಕಾರದ ಅಧಿಕಾರಿಗಳಿಂದಲೇ ಈ ಎರಡೂ ದೇಶಗಳಿಗೆ ಪರಿಸ್ಥಿತಿ ಸುಧಾರಿಸಿಕೊಳ್ಳುವ ಸಲಹೆಗಳು ಬರುತ್ತಿವೆ. ಹೀಗಾಗಿ ಈಗ ಪಾಕಿಸ್ತಾನದ ಮನವಿಗೆ ಸ್ಪಂದಿಸಿ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ತೋರಿರುವ ಆಸಕ್ತಿಯನ್ನು ಟ್ರಂಪ್ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ತೋರುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.