ಹಿಂದೂ ಸಂಪ್ರದಾಯದಲ್ಲಿ ಋತುಚಕ್ರವಿದ್ದ ಹೆಣ್ಣು ಮಕ್ಕಳು, ಅಡಿಗೆ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ತುಳಸಿ ಗಿಡ ಬಳಿ ಹೋಗುವಂತಿಲ್ಲ. ಹೀಗೆ ಇತ್ಯಾದಿ ಪದ್ಧತಿಗಳಿವೆ. ಇದೆಲ್ಲ ಪದ್ಧತಿಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿದ್ದಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇದೆ. ಹಾಗಾದ್ರೆ ಋತುಚಕ್ರದ ಸಮಯದಲ್ಲಿ ಹೆಣ್ಣು ಯಾವ ಕೆಲಸಗಳನ್ನ ಮಾಡಬಾರದು..? ಯಾಕೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲು ಋತುಚಕ್ರವನ್ನು ಅನುಭವಿಸಿದ್ದು ಹೆಣ್ಣಲ್ಲ, ಗಂಡು. ನಂಬಲಸಾಧ್ಯವಾದರೂ ಇದು ನಿಜ. ಶಿವನ ಕೈ ಮೂಲಕ ರಕ್ತ ಹರಿದು, ಶಿವನೇ ಮೊದಲು ಋತು ಚಕ್ರವನ್ನು ಅನುಭವಿಸಿದ್ದ. ಅದಾದ ಬಳಿಕ ಪಾರ್ವತಿ, ಶಿವನಿಂದ ಋತುಚಕ್ರವನ್ನ ತಾನು ತೆಗೆದುಕೊಂಡಳು. ಇನ್ನು ಋತುಚಕ್ರಕ್ಕೆ ಸಂಬಂಧಿಸಿದಂತೆ, ಹಲವು ನಿಯಮಗಳು ಆಚರಣೆಯಲ್ಲಿವೆ. ಇಂದಿಗೂ ಕೆಲ ಜನರು ಆ ಪದ್ಧತಿಯನ್ನ ಕಟ್ಟುನಿಟ್ಟಾಗಿ ಆಚರಿಸುತ್ತಿದ್ದಾರೆ.
ಮುಟ್ಟಾದಾಗ ಹೆಣ್ಣು ಮಕ್ಕಳು, ಅಡುಗೆ ಮಾಡುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ. ಗಿಡಗಳ ಬಳಿ ಹೋಗುವಂತಿಲ್ಲ. ಮನೆ ಜನರನ್ನು ಮುಟ್ಟುವಂತಿಲ್ಲ. ಒಂದು ಮೂಲೆಯಲ್ಲಿ ಅಥವಾ ಒಂದು ಕೋಣೆಯಲ್ಲಿ ಕುಳಿತುಕೊಳ್ಳಬೇಕು. ಆಕೆಗೆ ಸಪರೇಟ್ ಆಗಿ ಊಟದ ತಟ್ಟೆ, ಹಾಸಿಗೆ ದಿಂಬು ನೀಡಲಾಗುತ್ತದೆ. ಮೂರು ದಿನ ಆಕೆ ಅದನ್ನೇ ಬಳಸಿ, ನಾಲ್ಕನೇ ದಿನ ಅದನ್ನೆಲ್ಲ ಆಕೆಯೇ ಸ್ವಚ್ಛ ಮಾಡಿ, ತಲೆ ಸ್ನಾನ ಮಾಡಿ. ಗೋಮೂತ್ರ ಅಥವಾ ತುಳಸಿ ನೀರನ್ನ ಮನೆಗೆ ಚುಮುಕಿಸಿ, ಮನೆಯನ್ನ ಶುದ್ಧಗೊಳಿಸಬೇಕು.
ಇದಕ್ಕಿರುವ ವೈಜ್ಞಾನಿಕ ಕಾರಣಗಳೇನು ಅಂತಾ ನೋಡೋದಾದ್ರೆ, ಮನೆಯವರಿಂದ ಮಹಿಳೆಗೆ, ಮಹಿಳೆಯಿಂದ ಮನೆಯವರಿಗೆ ಯಾವುದೇ ರೋಗ ರುಜಿನಗಳು ತಾಗಬಾರದು ಅನ್ನೋದೇ ಇದರ ಹಿಂದಿರುವ ಉದ್ದೇಶ. ಅಲ್ಲದೇ ಮುಟ್ಟಾದಾಗ, ಹೆಣ್ಣಿನ ದೇಹದಲ್ಲಿ ಅತೀ ಹೆಚ್ಚು ಉಷ್ಣಾಂಶ ತುಂಬಿರುತ್ತದೆ. ಆಗ ಆ ಹೆಣ್ಣು ಅಡುಗೆ ಮನೆಗೆ ಹೋಗಿ, ಬೆಂಕಿ ಮುಂದೆ ಕುಳಿತು ಅಡಿಗೆ ಮಾಡಿದಾಗ, ಆಕೆಯ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಕೆಯ ಆರೋಗ್ಯ ಹಾಳಾಗುತ್ತದೆ. ಮತ್ತು ಆಕೆಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬುದು ಇದರ ಕಾರಣವಾಗಿದೆ. ಹೀಗಾಗಿಯೇ, ಮುಟ್ಟಾದಾಗ ಅಡುಗೆ ಸೇರಿ ಯಾವುದೇ ಕೆಲಸ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ ಎಂದು ಹೇಳಲಾಗಿದೆ.
ಮೊದಲಿನ ಕಾಲದಲ್ಲಿ ಪ್ರತಿದಿನ ಹೆಣ್ಣು ಮಕ್ಕಳು ಸ್ನಾನ ಮಾಡಿ, ಮನೆಯನ್ನ ಶುದ್ಧೀಕರಣ ಮಾಡಿ, ಹೂಗಳನ್ನ ಜೋಡಿಸಿ, ಮಂತ್ರೋಚ್ಛಾರಣೆ ಮಾಡಿ, ಪೂಜೆ ಮಾಡಬೇಕಾಗಿತ್ತು. ಅಲ್ಲದೇ, ಪೂಜೆಯ ಬಳಿಕ, ಮತ್ತೆ ದೇವರ ಕೋಣೆ ಸ್ವಚ್ಛ ಮಾಡಿ, ಅಡಿಗೆ ಮಾಡಿ, ದೇವರಿಗೆ ನೈವೇದ್ಯ ಮಾಡಬೇಕಿತ್ತು. ಮುಟ್ಟಾದಾಗ, ಇಷ್ಟೆಲ್ಲ ಕೆಲಸ ಮಾಡಲು ಹೆಣ್ಣುಮಕ್ಕಳಲ್ಲಿ ಶಕ್ತಿ ಇರುವುದಿಲ್ಲ. ಹೀಗಾಗಿ ಮುಟ್ಟಿನ ಸಮಯದಲ್ಲಿ ಪೂಜೆ ಮಾಡುಂತಿಲ್ಲ, ಹೋಮ ಹವನಗಳಲ್ಲಿ ಭಾಗಿಯಾಗುವಂತಿಲ್ಲ. ದೇವಸ್ಥಾನಕ್ಕೆ ಹೋಗುವಂತಿಲ್ಲ ಎಂಬ ನಿಯಮ ಮಾಡಲಾಯಿತು.