Political News: ರಾಜ್ಯದ ಬಹುತೇಕ ಎಲ್ಲ ಸಮುದಾಯಗಳನ್ನು ತೀವ್ರ ಕುತೂಹಲಕ್ಕೆ ದೂಡಿರುವ ಜಾತಿ ಗಣತಿ ವರದಿಯ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈ ವೋಲ್ಟೇಜ್ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಮುಖವಾಗಿ ರಾಜಕೀಯವಲ್ಲದೆ ಎಲ್ಲ ಸಮುದಾಯಗಳಲ್ಲೂ ಸಹ ಇದರ ಕಿಚ್ಚು ದಿನಕಳೆದಂತೆಲ್ಲ ಹೆಚ್ಚಾಗುತ್ತಾ ಹೋಗುತ್ತಿದೆ. ಅಲ್ಲದೆ ಜಾತಿ ಗಣತಿ ವರದಿಯನ್ನು ಮಂಡಿಸಿದ್ದ ರಾಜ್ಯ ಸರ್ಕಾರದಲ್ಲೇ ಇದರ ಕುರಿತು ಅಪಸ್ವರಗಳು ಜೋರಾಗಿವೆ. ಇದರ ನಡುವೆಯೇ ಕೆಲ ಸ್ವಾಮೀಜಿಗಳು ಅಖಾಡಕ್ಕೆ ಇಳಿದು ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸುತ್ತಿದ್ದರೆ, ಇನ್ನೂ ಕೆಲವರು ಬೆಂಬಲಿಸುತ್ತಿದ್ದಾರೆ. ಈ ಎಲ್ಲದರ ಕುರಿತು ಸೂಕ್ಷ್ಮವಾಗಿಯೇ ಅವಲೋಕನ ನಡೆಸುತ್ತಿರುವ ಸಿದ್ದರಾಮಯ್ಯ ಈ ಮೊದಲಿನಿಂದಲೂ ಜಾತಿ ಗಣತಿಯ ವರದಿಯ ಜಾರಿಗೆ ಉತ್ಸುಕತೆ ತೋರುತ್ತಿದ್ದಾರೆ.
ಇನ್ನೂ ರಾಜ್ಯದಲ್ಲಿನ ಈ ಜಾತಿ ಗಣತಿ ವರದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂಬ ಹೆಸರಿನಿಂದ ಕರೆಯುತ್ತಿರುವ ಕೆಲ ಸಚಿವರು ಒಂದೆಡೆಯಾದರೆ, ಇದು ನಮ್ಮ ಜಾತಿಗಳಿಗೆ ಅನ್ಯಾಯವೆಸಲಾಗಿರುವ ವರದಿ ಎಂದು ಕೆಲ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಜಾತಿ ಗಣತಿ ಜಾರಿಯಾದರೆ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ನಾವು ಕರ್ನಾಟಕ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿರುವ ಒಕ್ಕಲಿಗರ ಸಂಘದ ಹೋರಾಟಕ್ಕೆ ಲಿಂಗಾಯತ ಸಮುದಾಯವು ಬೆಂಬಲಿಸಿದೆ. ಇನ್ನೂ ಇಷ್ಟೇ ಅಲ್ಲದೆ ಜಾತಿ ಗಣತಿ ಜಾರಿಯಾಗದಿದ್ದರೆ ನಾವು ಸುಮ್ಮನಿರುವುದಿಲ್ಲ, ನಾವು ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ರಾಜ್ಯದ ಶೋಷಿತ ಸಮುದಾಯಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಎಲ್ಲ ಬೆದರಿಕೆ, ಎಚ್ಚರಿಕೆ ಹಾಗೂ ಪರ – ವಿರೋಧದ ನಡುವೆಯೇ ಇಂದಿನ ಸಚಿವ ಸಂಪುಟ ಸಭೆಯು ಮಹತ್ವ ಪಡೆದುಕೊಂಡಿದ್ದು, ಜಾತಿ ಗಣತಿಯ ವರದಿಗೆ ಒಂದು ಅಂತ್ಯ ಹಾಡಲಿದೆ ಎನ್ನಲಾಗುತ್ತಿದೆ.
ಅಧ್ಯಯನಕ್ಕಾಗಿ ವರದಿ ನೀಡಿರುವ ಸಿಎಂ..
ಅಲ್ಲದೆ ಪ್ರಮುಖವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ದಂಗಲ್ ವಿಚಾರವನ್ನು ಅರಿತುಕೊಂಡು ಖುದ್ದು ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಗೆ ಸಂಬಂಧಿಸಿದ್ದ ಮುಖ್ಯಾಂಶಗಳ ಸಂಕ್ಷಿಪ್ತ ವರದಿಯನ್ನು ಅಧ್ಯಯನಕ್ಕಾಗಿಯೇ ಈ ಮೊದಲೇ ಎಲ್ಲ ಸಚಿವರ ಕೈಗೆ ನೀಡಿದ್ದರು. ಅಂದಹಾಗೆ ಅದರಲ್ಲಿನ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಾಮಾಣಿಕ ಅಭಿಪ್ರಾಯ ಮಂಡಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಆ ಮುಖ್ಯಾಂಶಗಳನ್ನೆಲ್ಲ ಓದಿಕೊಂಡಿರುವ ಸಚಿವರು ಸಂಪುಟದಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ಸಿದ್ದರಾಗಿದ್ದಾರೆ. ಆದರೆ ಹೀಗೆ ಸಚಿವರ ಅಧ್ಯಯನದಲ್ಲಿನ ಮಾಹಿತಿ ಸೋರಿಕೆಯಾಗಿರುವುದೇ ರಾಜ್ಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರು ಬಂಡೇಳಲು ಕಾರಣವಾಗಿದೆ. ಆದರೆ ರಾಜ್ಯ ಸರ್ಕಾರದಲ್ಲಿರುವ ಸಚಿವರಿಗೂ ತಮ್ಮ ತಮ್ಮ ಸಮುದಾಯಗಳು ತೋರಿರುವ ದಾರಿ ತುಳಿಯುವ ಸಂದರ್ಭ ಎದುರಾಗಬಹುದು. ಯಾಕೆಂದರೆ ಪ್ರಬಲ ಜಾತಿಗಳನ್ನು ಹೊರತುಪಡಿಸಿ ಬಹುತೇಕ ದಲಿತ ಸಚಿವರು ಸಿದ್ದರಾಮಯ್ಯ ನಿಲುವಿಗೆ ಬದ್ಧರಾಗಿದ್ದಾರೆ. ಅಲ್ಲದೆ ಸರ್ಕಾರದಲ್ಲಿ ಪ್ರಬಲ ಜಾತಿಗಳ ಪ್ರಾಬಲ್ಯವೇ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಈ ಜಾತಿ ಗಣತಿ ವರದಿಯು ತೀವ್ರ ಕಗ್ಗಂಟಾಗಿದೆ.
ಸಮುದಾಯ ಬಿಟ್ಟು ಕೊಡದಿರಲು ನಿರ್ಧಾರ..!
ಇನ್ನೂ ಪ್ರಮುಖವಾಗಿ ಇಂದಿನ ಸಚಿವ ಸಂಪುಟ ಸಭೆಯು ಅತ್ಯಂತ ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ. ಅದರಲ್ಲೂ ಪ್ರಮುಖವಾಗಿ ಸರ್ಕಾರದಲ್ಲಿ ಯಾವ ರೀತಿಯಾಗಿ ತೀರ್ಮಾನ ಹೊರ ಬೀಳಬಹುದು ಎಂಬ ಕುತೂಹಲದ ಜೊತೆಗೆ ಒಂದು ವೇಳೆ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿರ್ಧಾರಗಳು ಬಂದರೆ ಮುಂದಿನ ಸಿದ್ದತೆಯಲ್ಲಿ ಸಚಿವರು ತೊಡಗಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಸಮುದಾಯಗಳನ್ನು ಬಿಟ್ಟು ಕೊಡಬಾರದು ಎಂಬುವುದು ಬಹುತೇಕ ರಾಜಕೀಯ ನಾಯಕರ ಇರಾದೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವ ಸಚಿವರು ಹೇಗೆ ತಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಎನ್ನುವುದನ್ನು ನೋಡಲು ರಾಜ್ಯದ ಜನತೆ ಉತ್ಸುಕವಾಗಿದೆ.
ಸಭೆಯಲ್ಲಿ ಏನಾಗಬಹುದು..?
ಅಲ್ಲದೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಏನಾಗಬಹದು..? ಸರ್ಕಾರ ಯಾವ ತೀರ್ಮಾನಕ್ಕೆ ಬರಬಹುದು ಎನ್ನುವುದನ್ನು ನೋಡಿದಾಗ. ವರದಿ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪಸಮಿತಿ ರಚಿಸುವ ಸಾಧ್ಯತೆಗಳಿವೆ. ರಾಜಕೀಯೇತರ ಅಧ್ಯಯನ ನಡೆಸಬೇಕೆಂದಾದರೆ ಹಿರಿಯ ಅಧಿಕಾರಿಗಳು ಅಥವಾ ವಿಷಯ ತಜ್ಞರ ಸಮಿತಿಯನ್ನು ಸರ್ಕಾರ ನೇಮಕ ಮಾಡಲು ಅವಕಾಶವಿದೆ. ಅಲ್ಲದೆ ಈ ಎರಡರಲ್ಲಿ ಯಾವುದೇ ಸಮಿತಿ ರಚನೆಯಾದರೂ ಅದಕ್ಕೆ ವರದಿ ಸಲ್ಲಿಸಲು 3 ರಿಂದ 6 ತಿಂಗಳು ಕಾಲಾವಕಾಶವಿರುತ್ತದೆ. ಇನ್ನೂ ಜನಪ್ರತಿನಿಧಿಗಳ ಒಪ್ಪಿಗೆ ಪಡೆಯಬೇಕೆಂಬ ಕೂಗು ಹೆಚ್ಚಾದರೆ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಸಂಪುಟ ಸಭೆಯು ನಿರ್ಧರಿಸಬಹುದು. ವರದಿಯನ್ನು ಅಪ್ಢೇಟ್ ಮಾಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಬಹುದು. ಇನ್ನೂ ಪ್ರಮುಖವಾಗಿ ಈ ಜಾತಿ ಗಣತಿ ವರದಿಯ ಬಗ್ಗೆ ಜಾತಿವಾರು ಆಕ್ಷೇಪಣೆಗಳಿದ್ದರೆ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷರಿಗೆ ಅವುಗಳನ್ನು ಆಲಿಸಲು ಸೂಚನೆ ನೀಡಬಹುದು. ಹೀಗಾಗಿ ಈ ಆಯ್ಕೆಗಳಲ್ಲಿ ಯಾವುದನ್ನು ಸರ್ಕಾರ ಆಯ್ದುಕೊಳ್ಳಲಿದೆ ಎನ್ನುವುದರ ಕಡೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನೂ ಅಭಿಪ್ರಾಯ ಮಂಡನೆ ವೇಳೆ ಸಚಿವರು ಅಪಸ್ವರ ಎತ್ತಿದರೆ ಅವರನ್ನು ಸಮಾಧಾನಗೊಳಿಸುವುದು ಹೇಗೆ ಎಂಬ ಕುರಿತೂ ಸಹ ಸಿದ್ದರಾಮಯ್ಯ ಯೋಚನೆಯಲ್ಲಿದ್ದಾರೆ.
ಒಂದೇ ಕ್ಯಾಬಿನೆಟ್‌ನಲ್ಲಿ ಕಷ್ಟ ಸಾಧ್ಯ..
ಅಲ್ಲದೆ ಒಂದೇ ಕ್ಯಾಬಿನೆಟ್ ಸಭೆಯಲ್ಲಿ 50 ಪುಟಗಳ ವಿವರವಾದ ವರದಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಣಯ ಪಡೆಯುವುದು ಕಷ್ಟ ಸಾಧ್ಯ. ಇನ್ನೂ ಪ್ರಮುಖ ಸಮುದಾಯಗಳು ಈ ಜಾತಿ ಗಣತಿ ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸುವ ಸಾಧ್ಯತೆಗಳಿರುವುದರಿಂದ ಅವುಗಳನ್ನು ನಿರ್ಲಕ್ಷ್ಯಿಸಿ ನಿರ್ಧರಿಸುವುದು ಸುಲಭದ ಮಾತಲ್ಲ. ಈಗಾಗಲೇ ಜಾತಿ ಜೇನುಗೂಡಿಗೆ ಕೈ ಹಾಕಿರುವ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರವು ಎಲ್ಲ ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದಲ್ಲಿ ಹೊತ್ತಿಕೊಂಡಿರುವ ಈ ಜಾತಿ ಜ್ವಾಲೆಯನ್ನು ಆರಿಸುವ ಕೆಲಸ ಮಾಡಬೇಕಿರುವುದು ಸವಾಲಾಗಿ ಪರಿಣಮಿಸಿದೆ. ಒಂದಿಷ್ಟು ತಪ್ಪಿದರೆ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ರಾಜಕೀಯ ಪಡಸಾಲೆಯ ಮಾತುಗಳಾಗಿವೆ.