ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ!: ವಿಪಕ್ಷಗಳ ವಿರುದ್ಧ ಗುಡುಗಿದ ಸಿಎಂ ಡಿಕೆಶಿ

Political News: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತವಾಗಿದ್ದು, ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ‌ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ ಹಾಗೂ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗದೆ, ತರ್ಕದ ವೇದಿಕೆಯಿಂದ ತರಗೆಲೆ ರಾಜಕಾರಣಕ್ಕೆ ಇಳಿದಿರುವುದು ನಿಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ವಿಪಕ್ಷಗಳ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವದ ಆಶಯಗಳನ್ನು ಬೀದಿಗೆ ತಂದು ಹರಾಜಿಗಿಟ್ಟಿರುವ ನೀವು, ನಿಮ್ಮ ಕಾರ್ಯಕರ್ತರಿಗೆ ಕಲಿಸುತ್ತಿರುವ ಸಂಸ್ಕಾರವಾದರೂ ಇಂತಹುದೇನಾ? ನೆನಪಿರಲಿ, ಇಂತಹ ಹಿಂಸಾತ್ಮಕ ದಾಳಿಗಳು ನಮ್ಮ ನಾಯಕರ ಹೋರಾಟದ ಹಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆಯೇ ಹೊರತು ಎಂದಿಗೂ ಧೃತಿಗೆಡಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಇದು ಬಸವಣ್ಣನವರ, ಕುವೆಂಪು ಅವರ ಶಾಂತಿಪ್ರಿಯ ಕರ್ನಾಟಕ. ಇಲ್ಲಿ ಇಂತಹ ವಿಕೃತ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ. ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬರ ವಿರುದ್ಧವೂ ನಾವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ.‌ ಪ್ರದೀಪ್ ಈಶ್ವರ್ ಅವರು ಧೃತಿಗೆಡಬೇಕಿಲ್ಲ; ಅವರ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

About The Author