Political News: ರಾಜ್ಯದಲ್ಲಿ ತೆರವಾಗಿರುವ ವಿಧಾನ ಪರಿಷತ್ ಸ್ಥಾನಗಳ ಆಯ್ಕೆಗಾಗಿ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಲಿರುವುದು ಇನ್ನಷ್ಟು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೂ ಹೈಕಮಾಂಡ್ ಭೇಟಿಗೆ ತೆರಳುತ್ತಿರುವ ಸಿದ್ದರಾಮಯ್ಯ ಅವರಿಗೆ ಕೇವಲ 4 ಸ್ಥಾನಗಳ ಆಯ್ಕೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಚ್ಚರಿಯಾದರೂ ಸತ್ಯ, ಈ ನಾಲ್ಕೇ ನಾಲ್ಕು ಸ್ಥಾನಗಳಿಗೆ 150 ಆಕಾಂಕ್ಷಿಗಳು ಅರ್ಜಿ ಹಾಕಿದ್ದಲ್ಲದೆ ತಮ್ಮ ಆಪ್ತ ನಾಯಕರು ಸಚಿವರು ಹಾಗೂ ಶಾಸಕರ ಸಾಮರ್ಥ್ಯದ ಮೇಲೆ ಪೈಪೋಟಿಯನ್ನೂ ಸಹ ಮುಂದುವರೆಸುತ್ತಿದ್ದಾರೆ.
ಇನ್ನೊಂದೆಡೆ ಜಾತಿವಾರು ಲೆಕ್ಕಾಚಾರದಿಂದಲೇ ಈ ಹಿಂದೆ ಒಕ್ಕಲಿಗ ಕೋಟಾದಡಿ ಎಂಎಲ್‌ಸಿಗಳಾಗಿದ್ದ ಸಿ.ಪಿ. ಯೋಗೇಶ್ವರ್, ಎಸ್‌ಸಿ ಕೋಟಾದಡಿ ಪ್ರಕಾಶ್ ರಾಠೋಡ್, ಹಿಂದುಳಿದ ವರ್ಗದಿಂದ ತಿಪ್ಪೇಸ್ವಾಮಿ ಹಾಗೂ ಬ್ರಾಹ್ಮಣ ಕೋಟಾದಿಂದ ಯು.ಬಿ.ವೆಂಕಟೇಶ್ ಇವರುಗಳು ಆಯ್ಕೆಯಾಗಿದ್ದರು. ಆದರೆ ಈಗ ಇವರಿಂದ ಖಾಲಿಯಾಗಿರುವ ಸ್ಥಾನಗಳಿಗಾಗಿ ಕೈ ಪಾಳಯದಲ್ಲಿ ದೊಡ್ಡ ಮಟ್ಟದಲ್ಲಿ ಲಾಭಿ ನಡೆಯುತ್ತಿದೆ. ಅಂದಹಾಗೆ ಯಾವ ಸಮುದಾಯದಿಂದ ಆ ಸ್ಥಾನ ತೆರವಾಗಿದೆಯೋ ಅದೇ ಸಮುದಾಯದವರಿಗೆ ಪರಿಷತ್ ನೀಡುವ ಚರ್ಚೆಗಳು ಕಾಂಗ್ರೆಸ್ ಪಕ್ಷದಲ್ಲಿ ಜೋರಾಗಿ ನಡೆಯುತ್ತಿವೆ.
150ಕೂ ಅಧಿಕ ಆಕಾಂಕ್ಷಿಗಳಿಂದ ಅರ್ಜಿ..!
ಅಲ್ಲದೆ ಈಗಾಗಲೇ ಕಾಂಗ್ರೆಸ್ ಅನುಸರಿಸುತ್ತಿರುವ ಈ ನಿಯಮವನ್ನು ತಿಳಿದುಕೊಂಡ ಕೆಲವರು ಇದೇ ಕೋಟಾದಡಿಯಲ್ಲಿ ಸ್ಥಾನ ಪಡೆಯಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಎಐಸಿಸಿ ಅಧ್ಯಕ್ಷರ ಮನೆಗಳ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಈಗ ಸದ್ಯದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ಗೆ ನಾಲ್ಕು ಜನರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಹೀಗಾಗಿ ಹೈಕಮಾಂಡ್ ಅಳೆದು-ತೂಗಿ ಲೆಕ್ಕಾಚಾರ ಹಾಕುತ್ತಿದೆ.
ಇನ್ನೂ ಮುಖ್ಯವಾಗಿ ಯಾವ್ಯಾವ ಸಮುದಾಯದಿಂದ ಯಾವ ಯಾವ ಆಕಾಂಕ್ಷಿಗಳು ಇದ್ದಾರೆ ಅನ್ನೋದನ್ನು ನೋಡೋದಾದರೆ. ಒಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್, ಮಂಡ್ಯದ ಸ್ಟಾರ್ ಚಂದ್ರು, ಬಿ.ಎಂ. ಸುದೀಪ್, ವಿನಯ್ ಕಾರ್ತಿಕ್ ಹಾಗೂ ಆರತಿ ಕೃಷ್ಣ ಸೇರಿದಂತೆ ಹಲವು ಜನ ಲಾಭಿ ನಡೆಸುತ್ತಿದ್ದಾರೆ. ಇನ್ನೂ ಹಿಂದುಳಿದ ವರ್ಗದಿಂದ ಸಿ.ಎಸ್.ದ್ವಾರಕಾನಥ್, ಎಚ್.ಎಂ.ರೇವಣ್ಣ, ರಮೇಶ್ ಬಾಬು, ವಿ.ಎಸ್. ಉಗ್ರಪ್ಪ, ದಿನೇಶ್ ಅಮೀನ್ ಮಟ್ಟು, ಸೂರಜ್ ಹೆಗ್ಡೆ ಹಾಗೂ ಪಿ.ಆರ್. ರಮೇಶ್ ಹೀಗೆ ಅನೇಕ ಜನರು ಕ್ಯೂ ನಲ್ಲಿದ್ದಾರೆ.
ಅಲ್ಲದೆ ಪರಿಶಿಷ್ಟ ಜಾತಿಯಡಿಯಲ್ಲಿ, ರಾಜು ಆಲಗೂರು, ಡಿ.ಬಸವರಾಜು, ಪತ್ರರ್ತ ಶಿವಕುಮಾರ್ ಬಲರಾಜ್ ನಾಯಕ್, ಕಾಂತಾ ನಾಯಕ್ ಹಾಗೂ ಪುಷ್ಪಾ ಅಮರನಾಥ್ ಒಳಗೊಂಡಂತೆ ಹಲವು ಜನರು ಆಕಾಂಕ್ಷಿಗಳಿದ್ದಾರೆ. ಅಂದಹಾಗೆ ಬ್ರಾಹ್ಮಣ ಕೋಟಾದಡಿಯಲ್ಲಿ ಯು.ಬಿ. ವೆಂಕಟೇಶ್, ವಿಜಯ್ ಮುಳಗುಂದ್ ಹಾಗೂ ರತ್ನ ಪ್ರಭ ಇವರುಗಳು ರೇಸ್‌ನಲ್ಲಿದ್ದಾರೆ. ಅಲ್ಪ ಸಂಖ್ಯಾತ ಮೀಸಲಿನಡಿ ಸಾಧು ಕೋಕಿಲ, ಆಘಾ ಸುಲ್ತಾನ್ ಹಾಗೂ ಸಯ್ಯದ್ ಇವರುಗಳು ಆಕಾಂಕ್ಷಿಗಳಾಗಿದ್ದಾರೆ.
ಸಿದ್ದರಾಮಯ್ಯ ಗೆಲ್ತಾರಾ ಸಣ್ಣ ಸಮುದಾಯಗಳ ಮನ..?
ಇನ್ನೂ ಈ ಎಲ್ಲ ಆಕಾಂಕ್ಷಿಗಳು ಆಯಾಯ ಸಮುದಾಯದ ಸ್ವಾಮೀಜಿಗಳು ಹಾಗೂ ನಾಯಕರ ಮೂಲಕ ಲಾಬಿ ಮುಂದುವರೆಸಿದ್ದಾರೆ. ಅಲ್ಲದೆ ಈ ಆಯ್ಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಅವರ ಸಾಮಾಜಿಕ ನ್ಯಾಯದ ಪಾಲನೆಯು ಆಗಬೇಕೆಂದು ಅವರು ಆಗಾಗ್ಗೆ ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ.
ಆದರೆ ಈಗ ಬಹುಪಾಲು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಿಸುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಪ್ರಮುಖವಾಗಿ ಸಣ್ಣ ಪುಟ್ಟ ಜಾತಿಗಳನ್ನು ಹಾಗೂ ಅವಕಾಶ ವಂಚಿತ ಸಮುದಾಯಗನ್ನೂ ಕೂಡ ಆಯ್ಕೆಯಲ್ಲಿ ಪರಿಗಣಿಸಬೇಕೆಂದು ಒತ್ತಾಯಗಳು ಜೋರಾಗಿವೆ. ಅಲ್ಲದೆ ಸದಾ ಅಹಿಂದ ಜಪ ಮಾಡುವ ಅವರು ಆ ಸಮುದಾಯಗಳ ನಾಯಕ ಅಂತಲೇ ಬಿಂಬಿಸಿಕೊಂಡಿದ್ದಾರೆ. ಈಗ ಅವರು ದೇವರಾಜು ಅರಸು ಅವರ ದಾಖಲೆಯನ್ನು ಮುರಿಯುವ ಕನಸನ್ನು ಹೊತ್ತಿದ್ದಾರೆ.
ಅಲ್ಲದೆ ಅವರು ಏಳು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವಲ್ಲಿ ಸಣ್ಣ ಸಮುದಾಯಗಳ ದೊಡ್ಡ ಪಾತ್ರವಿದೆ. ಆದರೆ ಅವುಗಳಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ಅವರು ಮಾಡಿಲ್ಲ ಎನ್ನುವ ಆರೋಪವೂ ಇದೆ. ಆದರೆ ಈಗ ಅವರಿಗೆ ಅದರಿಂದ ಹೊರಬರಲು ಅವಕಾಶ ಒದಗಿಬಂದಿದೆ, ಎಲ್ಲ ವರ್ಗಗಳಿಗೂ ಅದರಲ್ಲೂ ಅವಕಾಶ ವಂಚಿತ ಸಮುದಾಯಗಳಿಗೆ ಮನ್ನಣೆ ನೀಡಬೇಕೆಂಬ ಬಲವಾದ ಕೂಗು ಕೇಳಿ ಬರುತ್ತಿದೆ.
ಸಂಪುಟ ರಚನೆ ಮಹತ್ವದ ಚರ್ಚೆ..
ಅಂದಹಾಗೆ ದೆಹಲಿಯಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಾಣವಾಗಿರುವ ಕರ್ನಾಟಕ ಭವನದ ಕಾವೇರಿ ಕಟ್ಟಡವನ್ನು ಉದ್ಘಾಟನೆ ಮಾಡಿದ ಬಳಿಕ ಹೈಕಮಾಂಡ್ ನಾಯಕರೊಂದಿಗೆ ಸಿದ್ದರಾಮಯ್ಯ ಪರಿಷತ್ ನಾಮ ನಿರ್ದೇಶನ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.
ಮುಖ್ಯವಾಗಿ ಸಂಪುಟ ವಿಸ್ತರಣೆಯಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು..? ಈಗ ಸಚಿವರು ಮಾಡಿರುವ ರಿಪೋರ್ಟ್ ಕಾರ್ಡ್ ಆಧಾರದ ಮೇಲೆ ಕೆಲ ಸಚಿವರಿಗೆ ಗೇಟ್ ಪಾಸ್ ನೀಡುವ ಲಕ್ಷಣಗಳು ಕಂಡು ಬರುತ್ತಿವೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯ ತಮ್ಮ ನಾಲ್ಕು ದಿನಗಳ ಪ್ರವಾಸದ ಬಳಿಕ ಯಾವ್ಯಾವ ಕೈ ಶಾಸಕರಿಗೆ ಗುಡ್ ನ್ಯೂಸ್ ತರಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.