Spiritual: ಪುರಾಣ ಕಥೆಗಳನ್ನು ಕೇಳಿದಾಗ. ಅಲ್ಲಿ ನಮಗೆ ಶಿವ- ಪಾರ್ವತಿ, ರಾಮ ಸೀತೆ, ಕೃಷ್ಣ- ರಾಧೆ ಎಂಬ ಹೆಸರು ಕೇಳಿಬರುತ್ತದೆ. ಶಿವ ಮತ್ತು ಪಾರ್ವತಿ, ರಾಮ ಮತ್ತು ಸೀತೆ ಪತಿ- ಪತ್ನಿಯಾಗಿದ್ದಾರೆ. ಹಾಗಾಗಿ ಅವರನ್ನು ನಾವು ಸಂಗಾತಿ ಎಂದು ಪರಿಗಣಿಸಬಹುದು. ಆದರೆ ಕೃಷ್ಣ ರಾಧೆ ದೂರವಾದ ಪ್ರೇಮಿಗಳು. ಅವರು ವಿವಾಹವೇ ಆಗಿರಲಿಲ್ಲ. ಆದರೂ ಅವರನ್ನು ಭಕ್ತರು ಇಂದಿಗೂ ಸ್ಮರಿಸುತ್ತಾರೆ. ಹಾಗಾದರೆ ರಾಧಾ ಮತ್ತು ಕೃಷ್ಣರೇಕೆ ವಿವಾಹವಾಗಲಿಲ್ಲ ಅಂತಾ ತಿಳಿಯೋಣ ಬನ್ನಿ..
ಶ್ರೀಕೃಷ್ಣ ಮತ್ತು ರಾಧೆ ಬೇರೆ ಬೇರೆ ಅಲ್ಲ. ಅವರಿಬ್ಬರೂ ಒಂದೇ. ರಾಧೆ ಶ್ರೀಕೃಷ್ಣನ ಅಂಶವಾಗಿರುವಳು. ಹಾಗಾಗಿಯೇ ಅವರಿಬ್ಬರು ವಿವಾಹವಾಗಿರಲಿಲ್ಲ. ಪುರಾಣ ಕಥೆಯ ಪ್ರಕಾರ, ಇಡೀ ಲೋಕ ಶ್ರೀಕೃಷ್ಣನನ್ನು ಭಜಿಸುತ್ತದೆ. ಆದರೆ ಶ್ರೀಕೃಷ್ಣ ಯಾರನ್ನು ಭಜಿಸಬೇಕು..? ಈ ಮಾತು ಅವನ ಮನಸ್ಸಿಗೆ ಬಂದಾಗ, ನನ್ನನ್ನು ಇಡೀ ಲೋಕ ಪ್ರಾರ್ಥಿಸುತ್ತದೆ. ಜಪಿಸುತ್ತದೆ. ಭಕ್ತಿ ಮಾಡುತ್ತದೆ. ಆದರೆ ನಾನು ಯಾರನ್ನು ಜಪಿಸಲಿ..? ಯಾರ ಪ್ರಾರ್ಥನೆ ಮಾಡಲಿ..? ಯಾರಲ್ಲಿ ಭಕ್ತಿ ಮಾಡಲಿ ಎಂದು ಶ್ರೀಕೃಷ್ಣನಿಗೆ ಎನ್ನಿಸಿತ್ತಂತೆ.
ಹಾಗಾಗಿ ಶ್ರೀಕೃಷ್ಣ ತನ್ನದೇ ಅಂಶವಾದ ರಾಧೆಯನ್ನು ಸೃಷ್ಟಿಸಿದನಂತೆ. ರಾಧಾ- ಕೃಷ್ಣರ ಪರಿಚಯವಾದಾಗಿನಿಂದ ಹಿಡಿದು, ಇಂದಿನವರೆಗೂ ಕೃಷ್ಣ ರಾಧೆಯನ್ನೇ ಸ್ಮರಿಸುತ್ತಾನೆ ಎಂದೇ ಹೇಳಲಾಗುತ್ತದೆ. ನೀವು ಕೃಷ್ಣನಲ್ಲಿ ಪ್ರಾರ್ಥಿಸಿದರೆ, ನಿಮಗೆ ಬೇಕಾದ್ದು ಸಿಗದೇ ಇರಬಹುದು. ಆದರೆ ನೀವು ರಾಧೆಯನ್ನೊಮ್ಮೆ ಪ್ರಾರ್ಥಿಸಿ, ರಾಧೆ ರಾಧೆ ಎನ್ನಿ. ನೀವು ಅಂದುಕೊಂಡಿದ್ದೆಲ್ಲ ಕೃಷ್ಣ ನಿಮಗೆ ನೀಡುತ್ತಾನೆ. ಅಷ್ಟು ಶಕ್ತಿ ಇದೆ ರಾಧೆ ರಾಧೆ ಎಂಬ ಮಾತಿನಲ್ಲಿ.