ನಾವು ಹಿಂದೂ ಧರ್ಮಗ್ರಂಥದಲ್ಲಿ ಬರುವ, ಪುರಾಣದಲ್ಲಿ ಬರುವ ಹಲವು ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದ್ರೆ ಅದರಲ್ಲಿಯೂ ಹಲವು ವಿಷಯಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದ ವಿಷಯಗಳಲ್ಲಿ ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ ಕಥೆಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ್ದರ ಬಗ್ಗೆ ಪುರಾಣ ಕಥೆಗಳಲ್ಲಿ ಏನು ಹೇಳಲಾಗಿದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಹಿಂದೂ ಧರ್ಮದಲ್ಲಿ ಗೋಮಾತೆಗೆ ತಾಯಿಯ ಸ್ಥಾನ ನೀಡಲಾಗಿದೆ. ಹಬ್ಬ ಹರಿದಿನಗಳಲ್ಲಿ ಗೋಮಾತೆಗೆ ಪೂಜಿಸಲಾಗತ್ತೆ. ಗೋಮಾತೆಗೆ ಉಪ್ಪು ಹಾಕಿದ ಗೋಧಿ ಹಿಟ್ಟಿನ ತಿಂಡಿ ಕೊಟ್ರೆ ಉತ್ತಮ ಅನ್ನೋ ನಂಬಿಕೆ ಇದೆ. ಅಲ್ಲದೇ, ಶ್ರಾದ್ಧ, ಹಬ್ಬ ಹರಿದಿನಗಳಲ್ಲಿ ನೈವೇದ್ಯದ ಬಳಿಕ, ಮೊದಲ ಊಟವನ್ನು ಗೋವಿಗೆ ನೀಡಲಾಗುತ್ತದೆ. ಗೃಹ ಪ್ರವೇಶವಿದ್ದಾಗ, ಗೋವನ್ನ ಮನೆಯೊಳಗೆ ಕರೆತಂದು, ಅದಕ್ಕೆ ಪೂಜೆ ಮಾಡಿ, ಆಹಾರ ನೀಡಬೇಕು. ಅದರ ಬಳಿಕ ಅದು ಗೋಮೂತ್ರ ಮತ್ತು ಸಗಣಿ ನೀಡಿದರೆ, ಆ ಮನೆ ಉದ್ಧಾರವಾಗುತ್ತದೆ ಅನ್ನೋ ನಂಬಿಕೆಯೂ ಇದೆ.
ಇಂಥ ಗೋಮಾತೆಗೆ ತಾಯಿ ಪಾರ್ವತಿ ದೇವಿ ಶಾಪ ನೀಡಿದ್ದಳಂತೆ. ಒಮ್ಮೆ ಶಿವ ಪಾರ್ವತಿ ಸಮುದ್ರ ತಟಕ್ಕೆ ವಾಯುವಿಹಾರಕ್ಕೆಂದು ಬಂದಿದ್ದರಂತೆ. ಆಗ ಶಿವ ಪಾರ್ವತಿಯನ್ನು ಕುರಿತು, ನನಗೊಂದು ಪುಟ್ಟ ಕೆಲಸವಿದೆ. ನನ್ನ ಭಕ್ತ ನನಗಾಗಿ ಕಾಯುತ್ತಿದ್ದಾನೆ. ನಾನಲ್ಲಿ ಹೋಗಿ ಬರುತ್ತೇನೆಂದು ಹೋದರಂತೆ. ಪಾರ್ವತಿ ಶಿವನಿಗಾಗಿ ರಾತ್ರಿ ತನಕ ಕಾದಳಂತೆ. ಶಿವ ಎಷ್ಟು ಹೊತ್ತಾದರೂ ಬರದ ಕಾರಣ, ಪಾರ್ವತಿ ಸಮುದ್ರ ತೀರದಲ್ಲಿ, ಒಂದು ಪುಟ್ಟ ಶಿವಲಿಂಗ ತಯಾರಿಸಿ, ಅದಕ್ಕೆ ಪೂಜಿಸಿದಳಂತೆ.
ಶಿವ ಈ ಪೂಜೆಯನ್ನ ಗಮನಿಸುತ್ತಿದ್ದ. ಆದರೆ, ಮರುದಿನ ಪ್ರತ್ಯಕ್ಷನಾದ ಶಿವ, ನೀನು ಇಂದು ನನ್ನ ಪೂಜೆ ಮಾಡಲಿಲ್ಲವೇ..? ಪೂಜೆ ಮಾಡಿದ ಯಾವ ಕುರುಹು ಕಾಣುತ್ತಿಲ್ಲವೆಂದು ಹೇಳಿದನಂತೆ. ಅದಕ್ಕೆ ಪಾರ್ವತಿ, ನಾನು ಇಲ್ಲೇ ಪುಟ್ಟ ಶಿವಲಿಂಗ ತಯಾರಿಸಿ, ಅದನ್ನ ಪೂಜೆ ಮಾಡಿ, ಪೂಜಾ ಸಾಮಗ್ರಿ ಮತ್ತು ಶಿವಲಿಂಗವನ್ನ, ಸಮುದ್ರದಲ್ಲಿ ವಿಸರ್ಜಿಸಿದ್ದೇನೆ ಎಂದಳಂತೆ.
ಅದಕ್ಕೆ ಶಿವ, ನೀವು ನಿಜವಾಗಲೂ ನನ್ನ ಪೂಜೆ ಮಾಡಿದ್ದರೆ, ಅದಕ್ಕೆ ಸಾಕ್ಷಿ ತೋರಿಸಿ ಎಂದನಂತೆ. ಅದಕ್ಕೆ ಪಾರ್ವತಿ ಅಲ್ಲೇ ಇದ್ದ ಗೋಮಾತೆಯನ್ನ ಈ ಬಗ್ಗೆ ಕೇಳಿ ಎಂದಳಂತೆ. ಆಗ ಶಿವ ಈ ಬಗ್ಗೆ ಕೇಳಿದಾಗ, ಗೋಮಾತೆ ಇಲ್ಲವೆಂದು ತಲೆಯಲ್ಲಾಡಿಸಿದಳು. ಅದಕ್ಕೆ ಕ್ರೋಧಿತಳಾದ ಪಾರ್ವತಿ, ನೀನು ಗೋಮಾತೆ ಎನ್ನಿಸಿಕೊಂಡಳು. ಪೂಜ್ಯಸ್ಥಾನವನ್ನು ಪಡೆದುಕೊಂಡವಳು. ನೀನು ಈ ರೀತಿ ಅಸತ್ಯ ನುಡಿದಿದ್ದಕ್ಕಾಗಿ, ನಾನು ನಿನಗೆ ಶಾಪ ನೀಡುತ್ತೇನೆ. ನೀನು ಯಾವ ಬಾಯಲ್ಲಿ ಅಸತ್ಯ ಹೇಳಿದ್ದಿಯೋ, ಅದೇ ಬಾಯಲ್ಲಿ ಕಸಕಡ್ಡಿಯನ್ನ ತಿನ್ನುವಂತಾಗಲಿ ಎಂದು ಶಾಪ ನೀಡಿದಳಂತೆ.
ಅದಕ್ಕಾಗಿಯೇ, ಇಂದು ಗೋವುಗಳು ಸಿಕ್ಕ ಸಿಕ್ಕಿದ್ದನ್ನ ತಿನ್ನುತ್ತಿದೆ. ಹಳ್ಳಿಗಳಲ್ಲಿ ಕೊಟ್ಟಿಗೆಗಳಿದ್ದರೂ, ಹುಲ್ಲುಗಳು, ಸೊಪ್ಪು, ಹಿಂಡಿ, ಗಂಜಿ ಎಲ್ಲವೂ ಇದ್ದರೂ, ಒಮ್ಮೊಮ್ಮೆ ದನಗಳು ಪ್ಲಾಸ್ಟಿಕ್‌ಗಳನ್ನ, ಅಥವಾ ಸಿಕ್ಕ ಸಿಕ್ಕ ವಸ್ತುಗಳನ್ನ ತಿನ್ನುತ್ತಿದೆ.