Wednesday, April 2, 2025

Latest Posts

ಕೈ ಶಾಸಕನ ಆಹ್ವಾನದ ಬೆನ್ನಲ್ಲೇ ಭೇಟಿಯಾದ ಯತ್ನಾಳ್‌ : ಕಾಂಗ್ರೆಸ್‌ ಸೇರ್ತಾರಾ ಹಿಂದೂ ಹುಲಿ..?

- Advertisement -

Political News: ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ ಆರೋಪದಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ನಡೆಯು ದಿನಕಳೆದಂತೆಲ್ಲ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸುತ್ತಿದೆ. ಕಳೆದೆರಡು ದಿನಗಳ ಹಿಂದಷ್ಟೇ ಯತ್ನಾಳ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವ ನಿಟ್ಟಿನಲ್ಲಿ ನಾನು ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸುತ್ತೇನೆ ಎಂದು ಕಾಗವಾಡ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದರು. ಇದಾದ ಬಳಿಕ ಇದೀಗ ಯತ್ನಾಳ್‌ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿರುವುದು ರಾಜಕೀಯದಲ್ಲಿ ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಒಂದು ಗಂಟೆ ಮಹತ್ವದ ಮಾತುಕತೆ..,

ಇನ್ನೂ ಹುಬ್ಬಳ್ಳಿಯಲ್ಲಿ ಖಾಸಗಿ ಹೊಟೆಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಧಾರವಾಡ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಭೇಟಿಯಾಗಿ ಯತ್ನಾಳ್ ರಹಸ್ಯ ಮಾತುಕತೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಭೇಟಿಯಲ್ಲಿ ಸಾಕಷ್ಟು ಪ್ರಮುಖ ವಿಚಾರಗಳು ಉಭಯ ನಾಯಕರ ನಡುವೆ ಚರ್ಚೆಯಾಗಿವೆ ಎನ್ನಲಾಗುತ್ತಿದೆ. ಲಘು ಉಪಹಾರ ಸೇವಿಸುತ್ತಾ ಇಬ್ಬರು ಸಮಾಲೋಚನೆ ನಡೆಸುತ್ತಿರುವ ಫೋಟೋ ಹಾಗೂ ವಿಡಿಯೋ ಫುಲ್‌ ವೈರಲ್‌ ಆಗಿದ್ದು ರಾಜಕೀಯ ವಲಯದಲ್ಲಿ ಈ ಭೇಟಿಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಕೈ ಹಿಡೀತಾರಾ ಯತ್ನಾಳ್..?

ಇನ್ನೂ ಉಚ್ಚಾಟನೆಗೊಂಡ ಬಳಿಕವೂ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ಮೇಲಿನ ಯತ್ನಾಳ್‌ ಅವರ ಕೋಪ ತಣಿದಿಲ್ಲ. ಅವರ ವಿರುದ್ಧ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ಹೊಸ ಹೊಸ ಬಾಂಬ್‌ ಸಿಡಿಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗುತ್ತಿದ್ದಾರೆ. ಇನ್ನೂ ನಿನ್ನೆಯಷ್ಟೇ ವಿಜಯಪುರದಲ್ಲಿ ಕುಟುಂಬ ಸಮೇತ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ – ಹವನ ಮಾಡಿಸಿದ್ದ ಯತ್ನಾಳ್‌ ನೂತನ ಪಕ್ಷ ಕಟ್ಟುವ ಸುಳಿವನ್ನೂ ನೀಡಿದ್ದರು. ಆದರೆ ಕಾಂಗ್ರೆಸ್‌ ಶಾಸಕನ ಮಾತಿನ ಬಳಿಕ ಇದೀಗ ಬಸನಗೌಡ ಪಾಟೀಲ್ ಯತ್ನಾಳ್‌‌ ಕೈ ಮುಖಂಡನನ್ನು ಭೇಟಿಯಾಗಿರುವುದು ಎಲ್ಲೋ ಒಂದು ಕಡೆ ಅವರು ಕೈ ಹಿಡಿಯುತ್ತಾರಾ..? ಅನ್ನೋ ಪ್ರಶ್ನೆಗಳು ಉದ್ಭವವಾಗುತ್ತಿವೆ.‌ ಆದರೆ ಈ ಕುರಿತು ಇಬ್ಬರೂ ಗುಟ್ಟನ್ನು ಬಿಟ್ಟುಕೊಡದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

- Advertisement -

Latest Posts

Don't Miss