Tech News: ಇತ್ತೀಚಿನ ದಿನಗಳಲ್ಲಿ ಯುಪಿಐ ಪೇಮೆಂಟ್ ಮೆಥಡ್ ಹೆಚ್ಚಾದಂತೆ, ಟೆಕ್ನಾಲಜಿ ಮುಂದುವರೆದಂತೆ, ಜನರಿಗೆ ಇದರಿಂದ ಸಹಾಯವಾಗುವುದಕ್ಕಿಂತ ಹೆಚ್ಚು, ನಷ್ಟವೇ ಆಗುತ್ತಿದೆ. ಮೊದಲೆಲ್ಲ ಮೊಬೈಲ್‌ಗೆ ಬರುವ ಓಟಿಪಿ, ಎಟಿಎಂ ಕಾರ್ಡ್ ಮೂಲಕ ಸ್ಕ್ಯಾಮ್ ಮಾಡಲಾಗುತ್ತಿತ್ತು. ಆದರೆ ಇದೀಗ ಹೊಸ ಸ್ಕ್ಯಾಮ್ ಶುರುವಾಗಿದೆ.
ಅದೇನಂದ್ರೆ, ನಿಮ್ಮ ಮೊಬೈಲ್‌ಗೆ 1000 ರೂಪಾಯಿ ಕ್ರೆಡಿಟೆಡ್ ಎಂದು ಮೆಸೇಜ್ ಬರುತ್ತದೆ. ನೀವು ಖುಷಿಯಾಗಿ, ನನಗೆ ಯಾರೋ ಸಾವಿರ ರೂಪಾಯಿ ಕಳಿಸಿದ್ದಾರೆ, ಯಾರು ಕಳಿಸಿದ್ದಾರೆ ನೋಡೋಣ ಅಂತಲೋ, ಅಥವಾ ಎಷ್ಟು ಬ್ಯಾಲೆನ್ಸ್ ಇದೆ ಎಂದು ಚೆಕ್ ಮಾಡಲೋ, ನಿಮ್ಮ ಗೂಗಲ್ ಪೇ ಅಥವಾ ಆನ್‌ಲೈನ್ ಪೇಮೆಂಟ್ ಆ್ಯಪ್‌ನ ಪಿನ್ ನಂಬರ್ ಹಾಕಿದ್ರಿ ಅಂತಾ ಇಟ್ಕೋಳ್ಳಿ. ನಿಮ್ಮ ಅಕೌಂಟ್‌ನಲ್ಲಿರುವ ಅಷ್ಟು ದುಡ್ಡು ಥಟ್ ಅಂತಾ ಮಾಯವಾಗಿ ಬಿಡತ್ತೆ. ಇದನ್ನು Jump Deposit Scam ಎಂದು ಕರೆಯಲಾಗುತ್ತದೆ.
ನಿಮಗೆ ಯಾರು 1000 ರೂಪಾಯಿ ಕಳಿಸಿರುತ್ತಾರೋ, ಅವರ ಅಕೌಂಟ್‌ಗೆ ನಿಮ್ಮ ಹಣವೆಲ್ಲ ಹೋಗಿ ಸೇರಿರುತ್ತದೆ. ಏಕೆಂದರೆ, ಆ ಸ್ಕ್ಯಾಮರ್ ನಿಮಗೆ ಹಣ ಕಳಿಸುವ ಜೊತೆಗೆ, ವಿತ್‌ಡ್ರಾವಲ್ ರಿಕ್ವೆಸ್ಟ್ ಕಳಿಸಿರುತ್ತಾನೆ. ನೀವು ಪಿನ್ ಹಾಕುತ್ತಲೇ, ವಿತ್‌ಡ್ರಾವಲ್ ರಿಕ್ವೆಸ್ಟ್ ಆಕ್ಸೆಪ್ಟ್ ಆಗಿ ಬಿಟ್ಟುರತ್ತೆ. ಅಲ್ಲಿಗೆ ನಮ್ಮ ದುಡ್ಡು , ಸ್ಕ್ಯಾಮರ್ ಪಾಲಾಗಿರುತ್ತದೆ. ಹಾಗಾಗಿ ದುಡ್ಡು ಬಂತು ಅಂತಾ, ಅರ್ಜೆಂಟ್ ಆಗಿ ಗೂಗಲ್ ಪೇ ಪಿನ್ ಹಾಕುವ ಮುನ್ನ ಎಚ್ಚರವಾಗಿರಿ.
ಹಾಗಾದ್ರೆ ಈ ಸಮಸ್ಯೆಗೆ ಏನು ಪರಿಹಾರ…?
ನಿಮಗೆ ಯಾರಾದ್ರೂ ಹಣ ಕಳಿಸಿದ್ರೆ, ಅರ್ಧ ಗಂಟೆ ನೀವು ಆ ಮೆಸೇಜ್, ಅಥವಾ ಆನ್‌ಲೈನ್ ಪೇಮೆಂಟ್‌ಗೆ ಸಂಬಂಧಿಸಿದ ಆ್ಯಪ್ ಬಳಸಲು ಹೋಗಲೇಬೇಡಿ. ಅಷ್ಟರಲ್ಲಿ ಆ ಸ್ಕ್ಯಾಮರ್ ಕಳಿಸಿದ್ದ ರಿಕ್ವೆಸ್ಟ್ ಎಕ್ಸ್‌ಪೈರ್ ಆಗಿರುತ್ತದೆ. ಮತ್ತು ಆತ ಕಳಿಸಿದ್ದ ದುಡ್ಡು ನಿಮ್ಮದಾಗುತ್ತದೆ.