International News: ನೀವು ನಮ್ಮ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಕದ್ದಿರುವ ಪಿಒಕೆ ಪ್ರದೇಶದಿಂದ ಮೊದಲು ಜಾಗ ಖಾಲಿ ಮಾಡುವಂತೆ ಪಾಕಿಸ್ತಾನಕ್ಕೆ ಭಾರತ ಖಡಕ್ ಸೂಚನೆ ನೀಡಿದೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದ್ದರು. ಅದರೆ ಇದಾದ ಬೆನ್ನಲ್ಲೇ ಭಾರತವು ಪಾಕ್‌ಗೆ ನೇರವಾಗಿ ಮತ್ತೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನೋಡಿ ನೀವು ಎಷ್ಟೇ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೂ ಸಹ ಜಮ್ಮು ಮತ್ತು ಕಾಶ್ಮೀರವು ನಮ್ಮ ಭಾರತದ ಅವಿಭಾಜ್ಯ ಅಂಗವಾಗಿದೆ. ಮೊದಲು ಈ ವಿಚಾರದಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಅವರು ತಾಕೀತು ಮಾಡಿದ್ದಾರೆ. ನಮಗೆ ಸೇರಿರುವ ಭೂ ಪ್ರದೇಶವನ್ನು ಕದ್ದಿದ್ದಲ್ಲದೆ, ಕಣಿವೆ ರಾಜ್ಯದ ಬಗ್ಗೆ ನೀವು ಅಲ್ಲದ ವದಂತಿಗಳನ್ನು ಹರಡಿಸುತ್ತಿದ್ದೀರಿ. ಮುಖ್ಯವಾಗಿ ಉಗ್ರರಿಗೆ ಪ್ರಚೋದನೆ ನೀಡಿ ಮಾತುಕತೆಗಳ ಶಾಂತಿ ಭಂಗಕ್ಕೆ ಕಾರಣವಾಗಿದ್ದೀರಿ ಎಂದು ಪಾಕ್ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಪಾಕ್ ಭಯೋತ್ಪಾದನೆ ಜಾಗತಿಕವಾಗಿ ಹಾನಿ ಮಾಡುತ್ತಿದೆ..
ಇನ್ನೂ ಅಮೆರಿಕದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ್ದ ಸಂದರ್ಶನದಲ್ಲಿ ಪಾಕಿಸ್ತಾನ ಭಯೋತ್ಪಾದನೆಯ ಬಗ್ಗೆ ಕೆಲವು ಮಹತ್ವದ ವಿಚಾರಗಳನ್ನು ಮಾತನಾಡಿದ್ದರು. ಅಲ್ಲದೆ ಪಾಕಿಸ್ತಾನವು ಉಗ್ರರಿಗೆ ಸಪೋರ್ಟ್ ಮಾಡ್ತಿದೆ, ಫಂಡಿಂಗ್ ಕೂಡ ಮಾಡ್ತಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಳೆಸುತ್ತಿದೆ, ವಿಶ್ವಸಂಸ್ಥೆ ತರಹದ ಸಂಸ್ಥೆಗಳಲ್ಲಿ ಬದಲಾವಣೆಗಳು ಬರಬೇಕು ಅಂತಾ ಮುಖ್ಯವಾದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಇನ್ನೂ ಭಯೋತ್ಪಾದನೆ ಎಲ್ಲಿಂದ ಪ್ರಾರಂಭವಾಗುತ್ತದೆ ಎಂದು ಜಗತ್ತಿಗೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿದ್ದರು ಪಾಕಿಸ್ತಾನವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಮತ್ತು ಇದು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೂ ಹಾನಿ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಲಾಹೋರ್ ಭೇಟಿಯಿಂದ ಹಿಡಿದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನವನ್ನು ಆಹ್ವಾನಿಸುವವರೆಗೆ, ಭಾರತವು ಹಲವು ಬಾರಿ ಸ್ನೇಹದ ಹಸ್ತವನ್ನು ಚಾಚಿದೆ. ಅದಕ್ಕೆ ಪ್ರತಿಫಲವಾಗಿ ಸಿಕ್ಕಿದ್ದೇನು? ಪಾಕಿಸ್ತಾನ ಹಗೆತನ ಪ್ರದರ್ಶಿಸಿದೆ. ಪಾಕಿಸ್ತಾನದ ಜನರಿಗೆ ಹಿಂಸೆ ಮತ್ತು ಭಯೋತ್ಪಾದನೆ ಮುಕ್ತ ಭವಿಷ್ಯ ಸಿಗಲಿ ಎಂದು ಮೋದಿ ಹಾರೈಸಿದ್ದರು. ಪಾಕಿಸ್ತಾನ ತನ್ನ ತಪ್ಪುಗಳಿಂದ ಪಾಠ ಕಲಿತು ಉತ್ತಮ ಹಾದಿಯತ್ತ ಸಾಗುತ್ತದೆ ಎಂಬ ಆಶಯವನ್ನು ಮೋದಿ ಹೊರಹಾಕಿದ್ದರು.