International News: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ನಿಲ್ಲಿಸಲು ಅಮೆರಿಕದ ಪ್ರಸ್ತಾಪಿತ 30 ದಿನಗಳ ಕದನ ವಿರಾಮಕ್ಕೆ ಕೊನೆಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಟ್ರಂಪ್ ಮನವಿಗೆ ಸ್ಪಂದಿಸಿದ್ದಾರೆ. ಈ ಕುರಿತು ಜಾಗತಿಕ ಮಟ್ಟದ ಉಭಯ ನಾಯಕರು ಸುದೀರ್ಘ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷರ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಉಕ್ರೇನ್‌ನ ಅನೇಕ ನೀತಿಗಳ ಬಗ್ಗೆ ಚರ್ಚೆಯಾಗಿದೆ. ಅಲ್ಲದೆ ಪ್ರಮುಖವಾಗಿ ಈ ಕದನ ವಿರಾಮದ ವೇಳೆ ಅಮೆರಿಕ ಸೇರಿದಂತೆ ಇತರ ದೇಶಗಳಿಂದ ಉಕ್ರೇನ್‌ಗೆ ಪೊರೈಕೆಯಾಗುವ ಎಲ್ಲ ಶಸ್ತ್ರಾಸ್ತ್ರಗಳನ್ನು ನಿಲ್ಲಿಸಬೇಕು. ಆ ದೇಶಕ್ಕೆ ನೀಡಲಾಗುವ ಎಲ್ಲ ನೆರವಿನ ಅನುದಾನ ತಡೆ ಹಿಡಿಯಬೇಕು. ಹೀಗಾದಾಗ ಮಾತ್ರ ನಾವು ಉಕ್ರೇನ್‌ನ ಅಣುವಿದ್ಯುತ್ ಹಾಗೂ ಇಂಧನ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸುವುದಿಲ್ಲ ಎಂಬ ಷರತ್ತುಗಳನ್ನು ವಿಧಿಸುವ ಮೂಲಕ ಪುಟಿನ್ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಇನ್ನೂ ತಮ್ಮ ಸಾಮಾಜಿಕ ಮಾಧ್ಯಮ ಟ್ರುಥ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಶಾಂತಿ ಒಪ್ಪಂದಕ್ಕೆ ಅನೇಕ ಅಂಶಗಳ ಕುರಿತು ಮಾತುಕತೆ ನಡೆಸಲಾಗಿದೆ. ಇದರ ಪರಿಣಾಮ ಕದನ ವಿರಾಮ ಪ್ರಕ್ರಿಯೆ ನಡೆಸಲಾಗುವುದು. ರಷ್ಯಾ ಅಧ್ಯಕ್ಷರ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಎಲ್ಲಾ ಇಂಧನ ಮತ್ತು ಮೂಲಸೌಕರ್ಯದ ಮೇಲಿನ ಕದನ ವಿರಾಮಕ್ಕೆ ರಷ್ಯಾ ಒಪ್ಪಿದೆ. ಈ ಕದನ ವಿರಾಮವನ್ನು ತ್ವರಿತಗೊಳಿಸಲು ನಾವು ಕಾರ್ಯನಿರ್ವಹಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧವನ್ನು ಕೊನೆಗೊಳಿಸಬೇಕಿದೆ. ಯುದ್ಧ ಪ್ರಾರಂಭವಾದಾಗ ನಾನು ಅಧ್ಯಕ್ಷನಾಗಿದ್ದಿದ್ದರೆ ಈ ಯುದ್ದವೇ ಪ್ರಾರಂಭವಾಗುತ್ತಿರಲಿಲ್ಲ. ಯುದ್ಧದಲ್ಲಿ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ. ಪುಟಿನ್ ಮತ್ತು ಝೆಲನ್ಸ್ಕಿ ಇಬ್ಬರೂ ಯುದ್ದ ಕೊನೆಗೊಳಿಸಲು ಬಯಸಿದ್ದಾರೆ. ಈ ಪ್ರಕ್ರಿಯೆ ಇದೀಗ ಪೂರ್ಣ ಪ್ರಮಾಣದಲ್ಲಿದೆ. ಮಾನವೀಯತೆ ದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಯುದ್ಧ ನಿಲ್ಲಿಸುವುದು ಸೂಕ್ತ ಎಂದಿದ್ದ ವಿಟ್ಕಾಫ್..
ಇನ್ನೂ ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ಕೆಲ ದಿನಗಳ ಹಿಂದೆ ಟ್ರಂಪ್ ಸಂದೇಶದ ಜೊತೆಗೆ ಮಾಸ್ಕೊಗೆ ಆಗಮಿಸಿದ್ದ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ಯುದ್ಧಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಹಿರಿಯ ರಾಜತಾಂತ್ರಿಕ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಅಲ್ಲದೆ ಯುದ್ಧದಿಂದ ಎರಡೂ ರಾಷ್ಟ್ರಗಳ ಮೇಲೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಹೀಗಾಗಿ ಯುದ್ಧ ನಿಲ್ಲಿಸುವುದು ಸೂಕ್ತ ಎಂದು ವಿಟ್ಕಾಫ್ ಪುಟಿನ್‌ಗೆ ಕಿವಿ ಮಾತು ಹೇಳಿದ್ದರು. ಇನ್ನೂ 30 ದಿನಗಳ ಕದನ ವಿರಾಮದ ಬಗ್ಗೆಯೂ ಸುದೀರ್ಘ ಮಾತುಕತೆಯ ಬಳಿಕ ಅಂತಿಮವಾಗಿ ಷರತ್ತುಬದ್ಧವಾಗಿ ಉಕ್ರೇನ್ ಕದನ ವಿರಾಮಕ್ಕೆ ಆಗಲೇ ಒಪ್ಪಿಗೆ ಸೂಚಿಸಿತ್ತು. ಆದರೆ ರಷ್ಯಾ ಆಗ ಖಚಿತಪಡಿಸಿರಲಿಲ್ಲ.
ಒಟ್ನಲ್ಲಿ.. ಹಲವು ದಿನಗಳಿಂದ ನಡೆದಿದ್ದ ಈ ಬೀಕರ ಯುದ್ಧದಲ್ಲಿ ಸಾವಿರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದರು. ಅಲ್ಲದೆ ಎರಡೂ ದೇಶಗಳಿಗೆ ಅಪಾರ ನಷ್ಟವೂ ಸಂಭವಿಸಿತ್ತು. ಆದರೆ ಈ ಯುದ್ಧಕ್ಕೆ ಉಕ್ರೇನ್ ಒಪ್ಪಿಗೆ ಸೂಚಿಸಿದ್ದರೂ, ರಷ್ಯಾ ಸಮ್ಮತಿ ನೀಡಿರಲಿಲ್ಲ. ಅದೇನೆ ಇರಲಿ.. ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಈ ಯುದ್ಧಕ್ಕೆ ಇದೀಗ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ. ದ್ವೇಷ ಹಾಗೂ ವಸಾಹತು ಶಾಹಿ ಮನಸ್ಥಿತಿಗಳಿಂದ ತುಂಬಿರುವ ನಾಯಕರಲ್ಲಿ ಶಾಂತಿಯ ಭಾವ ಮೂಡುವಂತಾಗಲಿ. ಅಂತಿಮವಾಗಿ ಈ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡುವ ದಿಶೆಯಲ್ಲಿ ಉಭಯ ನಾಯಕರು ಸಾಗಿದಾಗ ಮಾತ್ರ ಎರಡೂ ದೇಶಗಳ ನಡುವೆ ಸ್ನೇಹಪರ ಬಾಂಧವ್ಯ ಮೂಡಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ.