ಸಾಮಾನ್ಯ ಕುಟುಂಬದಿಂದ ಬಂದು, ಕಠಿಣ ಪರಿಶ್ರಮದಿಂದ ಐಪಿಎಸ್ ಹುದ್ದೆ ಗಿಟ್ಟಿಸಿಕೊಂಡು ಸಾವಿರಾರು ಯುವಕರಿಗೆ ಪ್ರೇರಣೆಯಾಗಿದ್ದ ಅಧಿಕಾರಿಯೊಬ್ಬರು ಈಗ ಕರಾಳ ಆರೋಪ ಎದುರಿಸುತ್ತಿದ್ದಾರೆ. ಹೈದರಾಬಾದ್ನ ‘ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ’ಯಲ್ಲಿ (NPA) ತರಬೇತಿ ಪಡೆಯುತ್ತಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ವಿರುದ್ಧ ಲೈಂ*ಗಿಕ ಕಿರುಕುಳ, ಬೆದರಿಕೆ ಹಾಗೂ ಬ್ಲ್ಯಾಕ್ಮೇಲ್ನಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಇದೇ ವೇಳೆ, ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉದಯ್ ಕೃಷ್ಣಾ ರೆಡ್ಡಿ ಆಸ್ಪತ್ರೆಗೆ ದಾಖಲಾಗಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕ ಮೂಲದ, ವಿವಾಹಿತ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಉದಯ್ ಕೃಷ್ಣಾ ರೆಡ್ಡಿ ವಿರುದ್ಧ ಅತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಉದಯ್ ವಿರುದ್ಧ ಅತ್ಯಂತ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಉದಯ್ ತನಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕೋಣೆಯಲ್ಲಿ ಕೂಡಿಹಾಕಿ, ಕೂದಲು ಹಿಡಿದು ಕುತ್ತಿಗೆ ಹಿಸುಕಲು ಯತ್ನಿಸಿ, ಚಾ*ಕುವಿನಿಂದ ಪ್ರಾಣಬೆದರಿಕೆ ಒಡ್ಡಿದ್ದ ಎಂದೂ ತಿಳಿಸಿದ್ದಾರೆ. ಇಷ್ಟಕ್ಕೇ ನಿಲ್ಲದೆ, ಸಂತ್ರಸ್ತೆಯ ಖಾಸಗಿ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅದನ್ನು ಆಕೆಯ ಪತಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ‘ಭಾರತೀಯ ನ್ಯಾಯ ಸಂಹಿತಾ’ (BNS) ಹಾಗೂ ಐಟಿ (IT) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಬೆನ್ನಲ್ಲೇ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಆಂತರಿಕ ತನಿಖಾ ಸಮಿತಿಯು ತನಿಖೆ ಆರಂಭಿಸಿತ್ತು. ಅಕಾಡೆಮಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯವಿದ್ದ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಮಹಿಳಾ ಅಧಿಕಾರಿ ಮಾಡಿದ್ದ ಆರೋಪಗಳಲ್ಲಿ ಸತ್ಯಾಂಶವಿರುವುದು ದೃಢಪಟ್ಟಿದೆ. ಇದರಿಂದಾಗಿ, ಅಕಾಡೆಮಿಯು ಉದಯ್ ಕೃಷ್ಣಾ ರೆಡ್ಡಿ ಅವರನ್ನು ತರಬೇತಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿತು. ಜೊತೆಗೆ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದರು.
ಉದಯ್ ಕೃಷ್ಣಾ ರೆಡ್ಡಿ ಅವರ ಜೀವನ ಪಯಣ ಆಂಧ್ರಪ್ರದೇಶದ ಅನೇಕ ಯುವಕರಿಗೆ ಪ್ರೇರಣೆಯಾಗಿತ್ತು. ಬಾಲ್ಯದಲ್ಲೇ ಅನಾಥರಾಗಿದ್ದ ಇವರನ್ನು ಅಜ್ಜಿ ಕೂಲಿ ಕೆಲಸ ಮಾಡಿ ಸಾಕಿ ಬೆಳೆಸಿದ್ದರು. 2013ರಲ್ಲಿ ಆಂಧ್ರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಆಗಿ ಆಯ್ಕೆಯಾಗಿದ್ದ ಉದಯ್, ಸಾಧನೆಯ ಹಸಿವಿನಿಂದ ಆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ನಂತರ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ, ನಾಲ್ಕು ಬಾರಿ ವಿಫಲರಾದರೂ ಧೃತಿಗೆಡದೆ 5ನೇ ಪ್ರಯತ್ನದಲ್ಲಿ ಇಡೀ ದೇಶಕ್ಕೆ 360ನೇ ರ್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆದರೆ, ಈ ರೀತಿಯ ಕರಾಳ ಆರೋಪಗಳು ಅವರ ಇಡೀ ಸಾಧನೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ತರಬೇತಿಯಿಂದ ಅಮಾನತುಗೊಂಡ ಬೆನ್ನಲ್ಲೇ, ಉದಯ್ ಕೃಷ್ಣಾ ರೆಡ್ಡಿ ತಮ್ಮ ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ “ನಾನು ಯಾವುದೇ ತಪ್ಪು ಮಾಡಿಲ್ಲ, ಸತ್ಯ ಹೊರಬರಲಿದೆ” ಎಂದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರಂಭದಲ್ಲಿ ಉದಯ್ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಸುದ್ದಿಯನ್ನು ಅವರ ಪೋಷಕರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಉದಯ್ ಯಾವುದೇ ರೀತಿಯ ಆತ್ಮಹ*ತ್ಯೆ ಯತ್ನ ಮಾಡಿಲ್ಲ” ಎಂದು ಅವರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಹೈದರಾಬಾದ್ನ ಎಸ್.ಆರ್. ನಗರದ ಖಾಸಗಿ ಆಸ್ಪತ್ರೆಯಲ್ಲಿ ಉದಯ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನು ರಕ್ಷಿಸಬೇಕಾದ ಅಧಿಕಾರಿಯೇ ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅತ್ತಾಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕೋನಗಳಿಂದಲೂ ತನಿಖೆಯನ್ನು ಕಟ್ಟುನಿಟ್ಟಾಗಿ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ.




