ಬೆಂಗಳೂರು: ಕರ್ನಾಟಕದಲ್ಲಿ VIP ಪಕ್ಷ ಆರಂಭವಾಗಿ 100 ದಿನಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ರಾಜ್ಯದ 4ರಿಂದ 5 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಪಕ್ಷದ ಸಂಘಟನೆ ಬಲಪಡಿಸಲಾಗಿದೆ ಎಂದು VIP ಪಕ್ಷದ ರಾಜ್ಯಾಧ್ಯಕ್ಷ BK ಮೋಹನ್ ಕುಮಾರ್ ತಿಳಿಸಿದ್ದಾರೆ.
ಪಕ್ಷದ 100 ದಿನಗಳ ಪಯಣದ ಕುರಿತು ಮಾತನಾಡಿದ ಅವರು, ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಅಹಿಂದ ಸಮಾಜದ ಹಿತಾಸಕ್ತಿಗಾಗಿ ಪ್ರತ್ಯೇಕ ರಾಜಕೀಯ ಶಕ್ತಿ ರೂಪುಗೊಂಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಕರ್ನಾಟಕದಲ್ಲಿ ಈ ಹಿಂದೆ ಹಲವು ರಾಜಕೀಯ ಪಕ್ಷಗಳು ಹುಟ್ಟಿ ನಂತರ ಮರೆಯಾಗಿವೆ. ಆದರೆ VIP ಪಕ್ಷವು ಅಹಿಂದ ಸಮಾಜ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸೇರಿದಂತೆ ಹಿಂದುಳಿದ ವರ್ಗಗಳ ರಾಜಕೀಯ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಕೆಲಸ ಮಾಡಲಿದೆ ಎಂದು ಮೋಹನ್ ಕುಮಾರ್ ಹೇಳಿದರು.
60 ಕ್ಷೇತ್ರಗಳಲ್ಲಿ ಪಕ್ಷ ಗುರುತಿಸಿಕೊಂಡಿದೆ
ಅಹಿಂದ ಸಮಾಜದ ಜನರಿಗೆ ಆರ್ಥಿಕ ಶಕ್ತಿ ಕಡಿಮೆ ಇರುವುದರಿಂದ ರಾಜಕೀಯವಾಗಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಣಬಲದ ಆಧಾರದ ಮೇಲೆ ರಾಜಕೀಯ ನಡೆಯುತ್ತಿರುವ ಪರಿಸ್ಥಿತಿಯಲ್ಲಿ ನಮ್ಮ ಸಮಾಜಗಳ ಧ್ವನಿಯನ್ನು ವಿಧಾನಸಭೆಯಲ್ಲಿ ಬಲಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ರಾಜ್ಯದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಗುರಿ ಹೊಂದಿದ್ದೇವೆ. ಈ ಪೈಕಿ ಕನಿಷ್ಠ 25ರಿಂದ 30 ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವ ಗುರಿ ಹೊಂದಿದ್ದೇವೆ ಎಂದು BK ಮೋಹನ್ ಕುಮಾರ್ ಘೋಷಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ನಲ್ಲಿ ನಮ್ಮ ಸಮಾಜದ ನಾಯಕರು ಬೆಳೆಯಲು ಪ್ರಯತ್ನಿಸಿದಾಗ ಅವರನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಸಚಿವರೊಬ್ಬರ ರಾಜೀನಾಮೆ ಪಡೆದಿರುವ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, K.N. ರಾಜಣ್ಣ ಅವರ ವಿಚಾರದಲ್ಲಿಯೂ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿಯನ್ನು ಪ್ರಶ್ನಿಸಿದರು. ನಮ್ಮ ಸಮಾಜದ ನಾಯಕರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಮೋಹನ್ ಕುಮಾರ್, ಅಹಿಂದ ಸಮಾಜಕ್ಕೆ ತನ್ನದೇ ಆದ ರಾಜಕೀಯ ಶಕ್ತಿ ಬೇಕಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ VIP ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಿ, ಅಹಿಂದ ಸಮಾಜದ ಧ್ವನಿಯನ್ನು ವಿಧಾನಸೌಧದವರೆಗೆ ಕೊಂಡೊಯ್ಯುವುದಾಗಿ ಅವರು ತಿಳಿಸಿದರು.




