Mandya: ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಿದ ಮೂರು ದಿನಗಳ ಅಕ್ಷರ ಜಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಪ್ರತಿಯೊಬ್ಬರೂ ಪ್ರಾಮಾಣಿಕ ಹಾಗೂ ಜವಾಬ್ದಾರಿಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲಾಗಿದ್ದು, ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮಂಡ್ಯ ಜಿಲ್ಲೆಯಲ್ಲಿ ಸಂಘಟಿಸಿದ ಬಗ್ಗೆ ಮಾಹಿತಿ ನೀಡಲು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ನಾಡಿನಲ್ಲಿ ಇದುವರೆಗೂ ನಡೆದಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 20 ಸಮ್ಮೇಳನದಲ್ಲಿ ಭಾಗವಹಿಸಿದ್ದು, ಬಹಳ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನಡೆದ ಸಮ್ಮೇಳನವೆಂದರೆ ಅದು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಗೊ. ರು. ಚನ್ನಬಸಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಸಮ್ಮೇಳನವು ಬಹಳ ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿ ನಡೆಯಲು ಸಮ್ಮೇಳನದ ಕೆಲಸ ಕಾರ್ಯಗಳ ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೂ ಶ್ರಮಿಸಿದಂತಹ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್ ನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ವರ್ಗದವರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಿದ ಸರ್ಕಾರಿ ನೌಕರರು, ಶಿಕ್ಷಕರು ಸೇರಿದಂತೆ ಜಿಲ್ಲೆಯ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು.
ಸಮ್ಮೇಳನದ ಪ್ರಚಾರ ಹಾಗೂ ಯಶಸ್ವಿಗೆ ಕಾರಣಕರ್ತರದ ಪತ್ರಿಕಾ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದ ಎಲ್ಲಾ ಪತ್ರಕರ್ತರುಗಳಿಗೆ, ಛಾಯಾಚಿತ್ರಗ್ರಾಹಕರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಿ ಅವರಿಗೆ ನೆನೆಪಿನ ಕಾಣಿಕೆಯನ್ನು ನೀಡಿದರು.
ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ವಸ್ತು ಪ್ರದರ್ಶನ, ಮಳಿಗೆಗಳು, ಸ್ವಚ್ಛತೆ ಮತ್ತು ನೈರ್ಮಲ್ಯ, ವೇದಿಕೆ ಕಾರ್ಯಕ್ರಮಗಳು ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯು ಬಹಳ ಅಚ್ಚುಕಟ್ಟಾಗಿ ಜರುಗಿತು. ಸಮ್ಮೇಳನದ ಮೂರು ದಿನಗಳ ಕಾಲ ಸುಮಾರು 5 ರಿಂದ 6 ಲಕ್ಷ ಜನರು ಭಾಗವಹಿಸಿದ್ದು, ಜನರ ಪಾಲ್ಗೊಳ್ಳುವಿಕೆಯು ಸರೋವರದಂತಿತ್ತು. ಸಮ್ಮೇಳನದಲ್ಲಿ 30ಕ್ಕೂ ಹೆಚ್ಚು ಗೋಷ್ಠಿಗಳು ಬಹಳ ಯಶಸ್ವಿಯಾಗಿ ನಡೆದಿವೆ.
450ಕ್ಕೂ ಹೆಚ್ಚು ಪುಸ್ತಕ ಮಳಿಗೆ ಹಾಗೂ ಸಾಮಾನ್ಯ ಮಳಿಗೆಗಳು ಹಾಗೂ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ 450 ಮಳಿಗೆಗಳನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ವೇದಿಕೆ ಕಾರ್ಯಕ್ರಮಗಳಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ರಸ ಸಂಜೆ, ಪೊಲೀಸ್ ಬ್ಯಾಂಡ್, ಜನಪದ ನೃತ್ಯ ಮುಂತಾದವು ಜನರ ಮೆಚ್ಚುಗೆಯನ್ನು ಪಡೆದಿವೆ. ಸಮ್ಮೇಳನ ನಡೆಯುವ ಕಡೆ ಮಾತ್ರ ಮಳೆ ಬಂದು ಹಾರೈಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಗಳು ಕೂಡ ಸಮ್ಮೇಳನದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಎಲ್ಲಾ ಸ್ಥಳೀಯ ಶಾಸಕರುಗಳು ಸಂಪೂರ್ಣವಾಗಿ ತೊಡಗಿಸಿಕೊಂಡು ಹೆಚ್ಚಿನ ಆಸಕ್ತಿ ವಹಿಸಿ ಸಹಕರಿಸಿದರು. ಪ್ರಪ್ರಥಮವಾಗಿ ಮಂಡ್ಯದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು. 30 ವರ್ಷಗಳ ನಂತರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಅವಕಾಶ ಜಿಲ್ಲೆಗೆ ಸಿಕ್ಕಿರುವುದು ಸೌಭಾಗ್ಯವಾಗಿದೆ. 87ನೇ ಸಮ್ಮೇಳನಕ್ಕೆ ರಾಜ್ಯದ ಅನೇಕ ಜಿಲ್ಲೆಯಿಂದ ಬಂದ ಸಾಹಿತಿಗಳು ಮತ್ತು ಕನ್ನಡ ಅಭಿಮಾನಿಗಳು ಬಹಳ ಸಂಭ್ರಮಿಸಿದ್ದಾರೆ ಎಂದರು.
ಸಮ್ಮೇಳನ ನಡೆಸಲು ಸೂಕ್ತ ಸ್ಥಳ ಆಯ್ಕೆ ಮಾಡುವಲ್ಲಿ ಮುಖ್ಯ ಕಾರಣಕರ್ತರಾದ ಎಸ್ಪಿ, ಡಿಸಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಸ್ಥಳ ನೀಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕನ್ನಡ ರಥ ರಾಜ್ಯದಾದ್ಯಂತ ಸಂಚರಿಸಿ ಹಾಗೂ ಮಂಡ್ಯ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮ್ಮೇಳನದ ಯಶಸ್ವಿಗೆ ಕಾರಣವಾಯಿತು. ಈ ಮೂಲಕ ಹೊರ ಜಿಲ್ಲೆಯವರು ಸಮ್ಮೇಳನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕನ್ನಡಕ್ಕಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಜರುಗಿದ ಮ್ಯಾರಥಾನ್ ಓಟವು ಸಮ್ಮೇಳನದ ಪ್ರಚಾರ ಹಾಗೂ ಯಶಸ್ವಿಗೆ ಪಾತ್ರವಾಗಿದೆ. ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಸಮ್ಮೇಳನದಲ್ಲಿ ವಿದೇಶಿಗಾರು ಭಾಗಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 18 ದೇಶಗಳಿಂದ 250 ವಿದೇಶಿ ಕನ್ನಡಿಗರು ಭಾಗವಹಿಸಿದ್ದು, ಅತ್ಯುತ್ತಮವಾಗಿ ಜರುಗಿದ ಸಮ್ಮೇಳನಕ್ಕೆ ವಿದೇಶಗಳಿಂದ ಪ್ರಸಂಶೆಗಳು ಬರುತ್ತಿವೆ ಎಂದರು.
ಕನ್ನಡ ಭವನ ನಿರ್ಮಾಣ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮಾರಣಾರ್ಥವಾಗಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು. ಭವನದ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಿ ಶೀಘ್ರದಲ್ಲೇ ಶಂಕುಸ್ಥಾಪನೆಯನ್ನು ಕೈಗೊಳ್ಳಲಾಗುವುದು ಎಂದರು.
ಸಮ್ಮೇಳನಕ್ಕೆ ಪ್ರತಿಯೊಬ್ಬರೂ ಸಹಕರಿಸಿದಂತೆ ಮುಂದಿನ ದಿನದಲ್ಲೂ ಇದೇ ರೀತಿಯ ಸಹಕಾರ ಇರಲಿ. ಎಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ನ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಶುಗರ್ ಕಂಪನಿ ಅಧ್ಯಕ್ಷ ಸಿ. ಡಿ. ಗಂಗಾಧರ್, ಮುಡಾ ಅಧ್ಯಕ್ಷ ನಯೀಮ್, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.