Spiritual: ನಮಗೆಲ್ಲ ಸಾಕು ಪ್ರಾಣಿ ಅಂದ್ರೆ, ಬೆಕ್ಕು, ನಾಯಿ, ಮೊಲ, ಗಿಳಿ, ಹಸು, ಎಮ್ಮೆ, ಒಮ್ಮೊಮ್ಮೆ ಮಂಗ, ಪಾರಿವಾಳ, ಹೀಗೆ ಯಾರಿಗೂ ತೊಂದರೆ ಕೊಡದ ಪ್ರಾಣಿಗಳನ್ನು ಸಾಕಲಾಗುತ್ತದೆ. ಆದರೆ ಶೇತ್ಪಾಲ್ ಎಂಬ ಹಳ್ಳಿಯಲ್ಲಿ ಸಾಕುಪ್ರಾಣಿಯಾಗಿ ಸರ್ಪವನ್ನು ಸಾಕಲಾಗುತ್ತದೆ. ಇಲ್ಲಿನ ಪುಟ್ಟ ಪುಟ್ಟ ಮಕ್ಕಳು, ನಮ್ಮ ಮಕ್ಕಳೆಲ್ಲ ಬೆಕ್ಕು-ನಾಯಿಯ ಜೊತೆ ಆಡಿದಂತೆ, ಸರ್ಪದ ಜೊತೆ ಆಟವಾಡುತ್ತಾರೆ. ಆದರೆ ಇಲ್ಲಿಯವರೆಗೂ ಇಲ್ಲಿ ಯಾವ ಸರ್ಪವೂ, ಮನುಷ್ಯನಿಗೆ ಮತ್ತು ಯಾವ ಮನುಷ್ಯನೂ ಸರ್ಪಕ್ಕೆ ತೊಂದರೆ ಕೊಡಲಿಲ್ಲ.
ಶೇತ್ಪಾಲ್ ಎಂಬುದು ಮಹಾರಾಷ್ಟ್ರದ ಸೋಲ್ಹಾಪುರದಲ್ಲಿರುವ ಒಂದು ಹಳ್ಳಿಯ ಹೆಸರು. ಇದನ್ನು ಸರ್ಪಗಳ ಹಳ್ಳಿ ಅಂತಲೇ ಕರೆಯುತ್ತಾರೆ. ಇಲ್ಲಿ ಯಾರಾದರೂ ಹೊಸ ಮನೆ ಕಟ್ಟಿದರೆ, ಸರ್ಪ ಬಂದರೆ, ಇರಿಸಲೆಂದೇ, ಅದಕ್ಕೊಂದು ಜಾಗ ಮೀಸಲಿಡುತ್ತಾರೆ. ನಾವು ಬೆಕ್ಕು ನಾಯಿಗಳಿಗೆ ಅನ್ನ ಹಾಕುವಂತೆ, ಇಲ್ಲಿನ ಜನ ಸರ್ಪಕ್ಕೆ ಆಹಾರ ತೆಗೆದಿಡುತ್ತಾರೆ. ಏಕೆಂದರೆ, ಇಲ್ಲಿನ ಜನರಿಗೆ ಸರ್ಪವೆಂದರೆ, ಅಷ್ಟು ಪ್ರೀತಿ ಮತ್ತು ಭಕ್ತಿ .
ಇಲ್ಲಿನ ಪ್ರತೀ ಮನೆಯಲ್ಲೂ ಹಾವನ್ನು ಸಾಕಲಾಗುತ್ತದೆ. ಅಲ್ಲದೇ ಅದನ್ನು ಪೂಜಿಸಲಾಗುತ್ತದೆ. ಸರ್ಪ ತಾವು ಉದ್ಧಾರವಾಗಲು ಮುಖ್ಯ ಕಾರಣ ಅಂತಲೇ ಇಲ್ಲಿನ ಜನ ನಂಬಿದ್ದಾರೆ. ಅಲ್ಲದೇ ಈ ಊರಿನಲ್ಲಿ ಗಲ್ಲಿಗೊಂದು ನಾಗರ ಕಟ್ಟೆ, ನಾಗನ ದೇವಸ್ಥಾನ ಕಾಣಸಿಗುತ್ತದೆ.





