Health Tips: ಮೊದಲೆಲ್ಲ ಮಾನಸಿಕ ಒತ್ತಡ ಅನ್ನೋದು ಇರ್ತಾನೇ ಇರಲಿಲ್ಲ. ಕೆಲವೇ ಕೆಲವರು ಮಾತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದರು. ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಇದೀಗ ಟೆಕ್ನಾಲಜಿ ಮುಂದುವರೆದಂತೆ, ಕೆಲಸದ ಒತ್ತಡ, ಸಂಬಂಧದ ಒತ್ತಡ, ಆರ್ಥಿಕ ಒತ್ತಡಗಳೆಲ್ಲ ಹೆಚ್ಚಾಗಿ, ಹೆಚ್ಚಿನ ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಮಾನಸಿಕ ಒತ್ತಡಕ್ಕೆ ನಾವು ಒಳಗಾಗುತ್ತಿದ್ದೇವೆ ಎಂದು ಗೊತ್ತಾಗೋದಾದ್ರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ, ನಿಮಗೆ ಕೆಲ ಸೂಚನೆಗಳು ಸಿಗುತ್ತದೆ. ಆ ಸೂಚನೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೆಯ ಸೂಚನೆ ಅಂದ್ರೆ ನಿಮ್ಮ ದೇಹದಲ್ಲಿ ಶಕ್ತಿ, ಚೈತನ್ಯ ಕಡಿಮೆಯಾಗುತ್ತದೆ. ನೀವು ಹೆಚ್ಚು ಚಿಂತೆ ಮಾಡಿದಷ್ಟು ನಿಮ್ಮ ದೇಹದ ತೂಕ ಇಳಿಯುತ್ತದೆ. ಊಟ ಸೇರುವುದಿಲ್ಲ. ತಿಂದ ಊಟ ಸರಿಯಾಗಿ ಜೀರ್ಣವಾಗದೇ, ದೇಹದಲ್ಲಿ ನಿಶ್ಶಕ್ತಿ ಉಂಟಾಗುತ್ತದೆ. ಅಲ್ಲದೇ ದೇಹದಲ್ಲಿ ಶಕ್ತಿ, ಚೈತನ್ಯ ಕಡಿಮೆಯಾಗುತ್ತದೆ. ಇದು ನೀವು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದೀರಿ ಎಂಬುದಕ್ಕೆ ನಿಮಗೆ ಸಿಗುವ ಮೊದಲ ಸೂಚನೆ.
ಎರಡನೇಯ ಸೂಚನೆ, ಪದೇ ಪದೇ ತಲೆ ನೋವಾಗುವುದು. ನಿಮಗೆ ಪದೇ ಪದೇ ಅಥವಾ ವಾರದಲ್ಲಿ ಮೂರ್ನಾಲ್ಕು ಬಾರಿ ತಲೆ ನೋವಾಗುತ್ತಿದೆ ಎಂದರೆ, ನಿಮಗೆ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದರ್ಥ. ನೀವು ಯಾವುದೋ ವಿಷಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದೀರಿ ಎಂದರ್ಥ. ಇದರಿಂದ ಬರೀ ತಲೆನೋವಾಗುವುದಲ್ಲ, ನಿಮ್ಮ ಹೊಟ್ಟೆಯ ಆರೋಗ್ಯವೂ ಹಾಳಾಗುತ್ತದೆ.
ಮೂರನೇಯ ಸೂಚನೆ ಸರಿಯಾಗಿ ನಿದ್ರೆ ಬಾರದಿರುವುದು. ನೀವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೀರಿ ಎಂದರೆ, ನಿಮಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ, ಒಂದಲ್‌ಲ ಒಂದು ಯೋಚನೆ ಕಾಡುತ್ತಲೇ ಇರುತ್ತದೆ. ನಿದ್ರೆ ಕಡಿಮೆಯಾಗುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಆರೋಗ್ಯ ಹಾಳಾಗಲು ಶುರುವಾಗುತ್ತದೆ. ನೀವು ಮಾನಸಿಕ ಒತ್ತಡಕ್ಕೆ ಹೆಚ್ಚು ಒಳಗಾದಷ್ಟು, ನಿಮ್ಮ ಕೂದಲು ಉದುರುತ್ತದೆ. ಕೂದಲು ಬಿಳಿಯಾಗುತ್ತದೆ. ತ್ವಚೆಯ ಮೇಲೆ ನೆರಿಗೆ ಬರುತ್ತದೆ. ವಯಸ್ಸು ಹೆಚ್ಚಾದಂತೆ ಕಾಣಲಾರಂಭಿಸುತ್ತೀರಿ.
ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕು ಅಂದ್ರೆ, ನೀವು ಹೆಚ್ಚು ಚಿಂತೆ ಮಾಡಬಾರದು. ಧ್ಯಾನ ಮಾಡಬೇಕು. 8 ಗಂಟೆಗಳ ಕಾಲ ಸರಿಯಾಗಿ ನಿದ್ರಿಸಬೇಕು. ಆರೋಗ್ಯಕರವಾದ ಆಹಾರವನ್ನು, ಸಮಯಕ್ಕೆ ಸರಿಯಾಗಿ ಸೇವಿಸಬೇಕು. ಇನ್ನೊಬ್ಬರಿಗಾಗಿ ಅಥವಾ ಯಾರೋ ಏನೋ ಹೇಳುತ್ತಾರೆ ಎಂಬ ಕಾರಣಕ್ಕೆ, ನಿಮ್ಮ ಆರೋಗ್ಯ, ನಿಮ್ಮ ಖುಷಿಯನ್ನು ನೀವು ಎಂದಿಗೂ ಬಲಿ ಕೊಡಬಾರದು.