Political News: ಕನ್ನಡ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಸಿದ್ದರಾಮಯ್ಯ ಸರ್ಕಾರ ಇದೀಗ ರಾಜ್ಯದಲ್ಲಿ ತಯಾರಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಮುದ್ರಣ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಕುರಿತು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕದಲ್ಲಿ ತಯಾರಾಗುವ ಹಾಗೂ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಲೇಬಲ್ನಲ್ಲಿ ಉತ್ಪನ್ನದ ಹೆಸರು, ಬಳಕೆ ನಿರ್ದೇಶನ ಸೇರಿದಂತೆ ಎಲ್ಲವೂ ಬೇರೆ ಭಾಷೆಯ ಜೊತೆಗೆ ಕನ್ನಡದಲ್ಲಿಯೂ ಇರಬೇಕೆಂದು ಹೇಳಿದೆ.
ಕನ್ನಡದ ವಿಚಾರದಲ್ಲಿ ಸಿದ್ದು ಸರ್ಕಾರ ಮಹತ್ವದ ಹೆಜ್ಜೆ..
ರಾಜ್ಯದ ಉತ್ಪನ್ನಗಳ ಮೇಲೆ ಕನ್ನಡ ನಮೂದು ಕಡ್ಡಾಯ..
ಯಾವುದೇ ಭಾಷೆಯು ಆ ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಟೆ, ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಜೀವನ ನಡೆಸುವ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಸರ್ಕಾರವು ಜಾರಿಗೆ ತಂದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ನ್ನು ಈ ವರ್ಷದ ಮಾರ್ಚ್ ತಿಂಗಳ 12 ರಿಂದ ಸದರಿ ಅಧಿನಿಯಮದ ಕಲಂ 17 7ರಲ್ಲಿ ಆದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಹಾಗೂ ಮಾರಾಟವಾಗುವ ಎಲ್ಲ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದೇ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಖಡಕ್ ಆದೇಶ..
ಭಾಷೆ ನೆಲದ ಸಂಸ್ಕೃತಿ, ಸಂಪ್ರದಾಯ ಪ್ರತಿನಿಧಿಸುತ್ತದೆ ಎಂದ ಸರ್ಕಾರ..
ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಯಾವುದೇ ಉತ್ಪನ್ನಗಳಿರಲಿ ಅವುಗಳ ಮೇಲೆ ಮುದ್ರಣದಲ್ಲಿ ಕಡ್ಡಾಯವಾಗಿ ಕನ್ನಡದ ಬಳಕೆಯಾಗಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟು ದಿನ ಇಂಗ್ಲೀಷ್ ಬಾರದೆ ಉತ್ಪನ್ನಗಳ ಮೇಲಿನ ಬರಹ ಓದಲು ಪರದಾಡುತ್ತಿದ್ದವರಿಗೆ ಸರ್ಕಾರದ ಈ ನಿರ್ಧಾರ ನಿರಾಳವಾಗುವಂತೆ ಮಾಡಿದೆ.




