Bengaluru News: ನಾವು ನಮ್ಮ ಹಣ, ಒಡವೆಗಳು ಸುರಕ್ಷಿತವಾಗಿ ಇರುತ್ತವೆ ಎಂದು ಮನೆಯಲ್ಲಿ ಇಡದೆ ಬ್ಯಾಂಕ್ನಲ್ಲಿ ಇಟ್ಟಿರುತ್ತೇವೆ. ಆದರೆ ಇದೀಗ ಅಲ್ಲೂ ಸಹ ಭದ್ರತೆಯ ಪ್ರಶ್ನೆಗಳೂ ಎದ್ದಿವೆ. ಇದಕ್ಕೆ ಪುಷ್ಟಿ ನಿಡುವಂತೆ ಬೆಂಗಳೂರಿನಲ್ಲಿರುವ ಘಟನೆಯೊಂದು ನಡೆದಿದ್ದು, ಬ್ಯಾಂಕ್ ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಯನಗರದಲ್ಲಿರುವ 8ನೇ ಬ್ಲಾಕ್ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿದ್ದ ಗ್ರಾಹಕರೊಬ್ಬರ ಲಾಕರ್ನಲ್ಲಿದ್ದ 31.15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ. ಅಸಲಿ ಆಭರಣಗಳನ್ನು ಕೊಳ್ಳೆಹೊಡೆದು ನಕಲಿ ಆಭರಣಗಳನ್ನು ಅಲ್ಲಿ ಇಟ್ಟು ವಂಚಕರು ಪರಾರಿಯಾಗಿದ್ದಾರೆ.
ಇನ್ನೂ ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ವಂಚನೆಗೊಳಗಾಗಿರುವ ಜೆಪಿ ನಗರದ 7ನೇ ಹಂತದಲ್ಲಿರುವ ಪುಟ್ಟೇನಹಳ್ಳಿಯ ನಿವಾಸಿ ರಾಜೇದ್ರ ಪಾಟೀಲ್ ಎನ್ನುವವರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ರಾಜು ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸರು ಹೇಳೋದೇನು..?
ಅಲ್ಲದೆ ರಾಜೇಂದ್ರ ಅವರು ಕಳೆದ 2021ರ ಜೂನ್ ತಿಂಗಳಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ವೈಯಕ್ತಿಕ ಲಾಕರ್ ಸೇವೆಯನ್ನು ಪಡೆದುಕೊಂಡಿದ್ದರು. ಸುರಕ್ಷತೆಗಾಗಿ ಲಾಕರ್ ಪಡೆದಿದ್ದ ಅವರು ಅದರಲ್ಲಿ ತಮ್ಮ ಚಿನ್ನಾಭರಣ ಹಾಗೂ ಖಾಸಗಿ ದಾಖಲೆಗಳನ್ನು ಇಟ್ಟಿದ್ದರು. ಇನ್ನೂ 2024ರ ಜೂನ್ 6 ಹಾಗೂ 31ರಂದು ಲಾಕರ್ ಓಪನ್ ಮಾಡಿದ್ದರು. ಅಲ್ಲದೆ ರಾಜೇಂದ್ರ ತಮ್ಮ ಹತ್ತಿರ ಇದ್ದ ಒಂದು ಕೀ ಹಾಗೂ ಬ್ಯಾಂಕ್ನ ಮ್ಯಾನೇಜರ್ ಬಳಿ ಇದ್ದ ಕೀ ಪಡೆದು ಲಾಕರ್ ತೆರೆದು ಪರಿಸೀಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೂ ರಾಜೇಂದ್ರ ಕಳೆದ ಅಕ್ಟೋಬರ್ 7 ರಂದು ಕೊನೆಯದಾಗಿ ಲಾಕರ್ ತೆರೆದು ನೋಡಿದ್ದ ವೇಳೆ 31.15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಲಾಕರ್ನಲ್ಲಿ ಕಂಡುಬಂದಿದ್ದವು. ಅಲ್ಲದೆ ಕಳೆದ ಫೆಬ್ರವರಿ 20ರಂದು ಮತ್ತೊಮ್ಮೆ ಲಾಕರ್ ತೆರೆದು ನೋಡಿದಾಗ ಚಿನ್ನಾಭರಣಗಳು ಇರಲಿಲ್ಲ. ಆಗ ಅದರಲ್ಲಿ ಅಸಲಿ ಬದಲಿಗೆ ನಕಲಿ ಚಿನ್ನಾಭರಣಗಳು ಕಂಡು ಬಂದಿದ್ದವು. ಈ ಬಗ್ಗೆ ರಾಜೇಂದ್ರ ಬ್ಯಾಂಕ್ನ ಮ್ಯಾನೇಜರ್ಗೆ ಕೇಳಿದಾಗ, ನನಗೆ ಆಭರಣಗಳ ಬಗ್ಗೆ ಗೊತ್ತಿಲ್ಲ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡ ರಾಜೇಂದ್ರ, ಬ್ಯಾಂಕಿನ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ದೂರನ್ನು ನೀಡಿದ್ದು ಅದರ ಅಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ಹೇಳಿದ್ದಾರೆ.
ಒಟ್ನಲ್ಲಿ.. ನಮ್ಮ ಬಳಿ ಇರುವ ಹಣ, ಒಡವೆಯನ್ನು ನಮ್ಮ ಮನೆಯಗಿಂತಲೂ ಹೆಚ್ಚಾಗಿ ನಂಬಿಕೆ ಇಟ್ಟಿರುವ ಬ್ಯಾಂಕ್ಗಳಲ್ಲಿ ಸುರಕ್ಷಿತವಾಗಿರುತ್ತವೆಂದು ಇಡುವ ಮುನ್ನ ಸಾವಿರ ಬಾರಿ ಯೋಚಿಸಲೇಬೇಕಾದ ಸನ್ನಿವೇಶ ಎದುರಾಗಿದೆ. ಯಾಕೆಂದ್ರೆ ಕಾಯುವವರೇ ಕೊಲ್ಲುವವರಾದರೆ ನಮ್ಮ ಮೊರೆ ಕೇಳುವವರಾರು ಎನ್ನುವಂತೆ ಸುರಕ್ಷತೆಯನ್ನೇ ಮಾನದಂಡವಾಗಿ ಕಾರ್ಯನಿರ್ವಹಿಸುವ ಬ್ಯಾಂಕ್ಗಳಲ್ಲೆ ಹೀಗೆ ವಂಚನೆಗಳು ನಡೆದರೆ ಗ್ರಾಹಕರು ಇನ್ಯಾರನ್ನು ಅವಲಂಬಿಸಬೇಕು ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ಅದೇನೆ ಇರಲಿ..ಬ್ಯಾಂಕ್ಗಳು ತಾವು ಜವಾಬ್ದಾರಿಯನ್ನು ಮರೆತಾಗಲೇ ಈ ರೀತಿಯ ಘಟನೆಗಳು ನಡೆಯಲು ಸಾಧ್ಯವೆನ್ನುವುದು ನಾವು ಅಲ್ಲಗಳೆಯುವಂತಿಲ್ಲ.




