Bengaluru News: ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ 10 ರೂಪಾಯಿಗೆ ಹೆಚ್ಚಳ ಮಾಡುವಂತೆ ರೈತರು ಸರ್ಕಾರದ ಎದುರು ತಮ್ಮ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯರಾದ ಉಮಾಶ್ರೀ, ಡಾ. ಎಂ.ಜಿ. ಮುಳೆ ಹಾಗೂ ಹೇಮಲತಾ ನಾಯಕ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಮುಂದೆ ರೈತರು ಹಾಲಿನ ದರದ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಈ ವಿಚಾರ ಇನ್ನೂ ಪರಿಶೀಲನೆಯಲ್ಲಿ ಇದೆ ಎಂದು ಹೇಳಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಹಾಲಿನ ಉತ್ಪಾದನೆಯೂ ಹೆಚ್ಚಾಗುತ್ತಿದೆ, ಹೀಗಾಗಿ ಹಾಲಿನ ದರವನ್ನು ಏರಿಕೆ ಮಾಡಬೇಕು ಎನ್ನುತ್ತಿರುವ ಅವರ ಬೇಡಿಕೆಯು ಸರಿಯಾಗಿಯೇ ಇದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಇನ್ನೂ ಚರ್ಚೆಯು ಮಂದುವರೆದಿದೆ. ಆದರೆ ಸರ್ಕಾರವೇ ಅಂತಿಮವಾಗಿ ಬೆಲೆ ನಿಗದಿಪಡಿಸಲಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ. ಅಲ್ಲದೆ 656.07 ಕೋಟಿ ರೂಪಾಯಿ ಮೊತ್ತವನ್ನು ಸರ್ಕಾರವು ಹಾಲು ಉತ್ಪಾದಕರಿಗೆ ಇನ್ನೂ ನೀಡಬೇಕಿದೆ. ಅಲ್ಲದೆ 613.58 ಕೋಟಿ ರೂಪಾಯಿ ಸಾಮಾನ್ಯ ವರ್ಗದವರಿಗೆ, 18.29 ಕೋಟಿ ರೂಪಾಯಿ ಹಾಗೂ 24.20 ಕೋಟಿ ರೂಪಾಯಿಗಳಷ್ಟು ಹಣ ಬಾಕಿ ಇದೆ ಎಂದು ಸಚಿವರು ಸದನಕ್ಕೆ ವಿವರಿಸಿದ್ದಾರೆ.
90.4547 ಫಲಾನುಭವಿಗಳಿಗೆ ನಾಲ್ಕೈದು ತಿಂಗಳಿಂದ ಪ್ರೋತ್ಸಾಹ ಧನವು ಬಾಕಿ ಇದೆ. ಆದರೆ ಇದಕ್ಕಾಗಿ ಹಣಕಾಸಿನ ಕೊರತೆ ಇದೆ, ಹೆಚ್ಚುವರಿಯಾಗಿ ಅನುದಾನವನ್ನು ನೀಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಹಣ ಬಿಡುಗಡೆಯಾದ ಬಳಿಕ ತಕ್ಷಣ ಉಳಿದ ಎಲ್ಲ ಬಾಕಿಗಳನ್ನು ಪಾವತಿ ಮಾಡಲಾಗುವುದು ಎಂದು ವೆಂಕಟೇಶ್ ಭರವಸೆ ನೀಡಿದ್ದಾರೆ.
ಅಲ್ಲದೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲಿನ ಉತ್ಪಾದನೆ ಹಾಗೂ ಪ್ರೋತ್ಸಾಹ ಧನವನ್ನು ಗಮನದಲ್ಲಿರಿಸಿಕೊಳ್ಳದೆ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಆರ್ಥಿಕ ವರ್ಷದಲ್ಲೂ ನೂರಾರು ಕೋಟಿ ರೂಪಾಯಿ ಬಾಕಿ ಉಳಿದುಕೊಂಡಿದ್ದು, ಒಟ್ಟು 704 ಕೋಟಿ ರೂಪಾಯಿಗಳಷ್ಟಿತ್ತು ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಆದರೆ ಅದನೆಲ್ಲ ಈಗ ನಾವು ಪಾವತಿ ಮಾಡಿದ್ದೇವೆ ಎಂದು ಅವರು ವಿಧಾನಪರಿಷತ್‌ನಲ್ಲಿ ವಿವರಿಸಿದ್ದಾರೆ.



