ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತಮ್ಮದೇ ಮಾತಿನ ಶೈಲಿಯಲ್ಲಿಯೇ ಫೈರ್ ಮಾಡಿದ್ದಾರೆ. ನನ್ನ ಉಚ್ಚಾಟನೆಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ಕಾರಣವಾಗಿದ್ದಾರೆ. ಆದರೆ ನಾನು ಮತ್ತೆ ಬಿಜೆಪಿಗೆ ವಾಪಸ್ ಬರ್ತೀನಿ. ಅಲ್ಲದೆ 2028ಕ್ಕೆ ವಿಜಯೇಂದ್ರ ಸಿಎಂ ಆಗಲು ಬಿಡುವುದಿಲ್ಲ ಎಂಬ ಸವಾಲನ್ನು ಅವನಿಗೆ ಹಾಕ್ತೀನಿ. ಆಗ ನಾನೇ 2028ಕ್ಕೆ ಈ ರಾಜ್ಯದ ಮುಖ್ಯಮಂತ್ರಿಯಾಗ್ತೀನಿ ಎನ್ನುವ ಮೂಲಕ ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.
ಮತ್ತೆ ವಾಪಸ್ ಬರ್ತೀನಿ..
ನಾನು ಯಾವಾಗಲೂ ಸತ್ಯದ ಪರವಾಗಿದ್ದೇನೆ, ಸತ್ಯವನ್ನೇ ಮಾತನಾಡುತ್ತೇನೆ, ಹೇಳೋದನ್ನು ನೇರವಾಗಿಯೇ ಹೇಳ್ತೀನಿ ಅನ್ನೋದಕ್ಕಾಗಿಯೇ ನನ್ನನ್ನು ಬಿಜೆಪಿ ಪಾರ್ಟಿಯಿಂದ ಹೊರಹಾಕಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಆದಷ್ಟು ಶೀಘ್ರವೇ ಬಯಲಾಗಲಿದೆ. ಬಿಜೆಪಿಗೆ ಹೇಗೆ ವಾಪಸ್ ಬರೋದು ಗೊತ್ತಿದೆ. ನನ್ನದೇ ಪವರ್ ಜೊತೆ ನಾನು ವಾಪಸ್ ಬರ್ತೀನಿ ಎಂದು ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿ ಕಾರಿದ್ದಾರೆ.
ಪಕ್ಷದಲ್ಲಿನ ದೊಡ್ಡ ಶಕ್ತಿಯೇ ಬೆನ್ನಿಗಿದೆ..!
ನನ್ನ ಉಚ್ಚಾಟನೆ ವಾಪಸ್ ಪಡೆಯಲು ಯಾರ ಬಳಿ ಹೋಗಿ ಕೈ ಕಾಲು ಹಿಡಿಯುವುದಿಲ್ಲ. ಹೈಕಮಾಂಡ್ ಭೇಟಿಯಾಗೋದಿಲ್ಲ, ವಿಷಾದನೂ ವ್ಯಕ್ತಪಡಿಸುವುದಿಲ್ಲ ಜೊತೆಗೆ ಯಾರಿಗೂ ಕ್ಷಮೆ ಕೇಳೋದೂ ಇಲ್ಲ. ರಾಜ್ಯದ ಸಂಸದರಲ್ಲಿ ರಾಘವೇಂದ್ರ ಒಬ್ಬರನ್ನು ಬಿಟ್ರೆ ಉಳಿದವರೆಲ್ಲರಿಗೂ ವಿಜಯೇಂದ್ರ ಅಧ್ಯಕ್ಷರಾಗಿರೋದು ಒಪ್ಪಿಗೆ ಇಲ್ಲ, ಎಲ್ಲರೂ ಈ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ನನ್ನ ಜೊತೆ ರಮೇಶ್ ಜಾರಕಿಹೊಳಿ ಅಷ್ಟೇ ಇಲ್ಲ ರಾಜ್ಯದ ಸಂಸದರು, ಶಾಸಕರು ಹಾಗೂ ಸಾಮಾನ್ಯ ಕಾರ್ಯಕರ್ತರು ಇದ್ದಾರೆ. ಇನ್ನೂ ನನ್ನ ಬೆನ್ನಿಗೆ ಪಕ್ಷದಲ್ಲಿನ ದೊಡ್ಡ ಶಕ್ತಿಯೇ ಇದೆ ಎಂದು ಯತ್ನಾಳ್ ಅದೇ ಗತ್ತಿನಲ್ಲಿ ವಿಜಯೇಂದ್ರ ವಿರುದ್ಧ ಹಲ್ಲು ಮಸೆದಿದ್ದಾರೆ.
ಹಿಂದುಗಳೇ ನನ್ನ ಹೈಕಮಾಂಡ್..
ಅಲ್ಲದೆ ಈಗ ನಾನು ಫ್ರೀ ಬರ್ಡ್ ನನ್ಯಾರು ಕೇಳ್ತಾರೆ..? ನನ್ನ ಜನರು ಹಾಗೂ ಹಿಂದುಗಳೇ ನನ್ನ ಹೈಕಮಾಂಡ್, ಅವರು ಏನು ಹೇಳ್ತಾರೋ ಅದೇ ರೀತಿ ಮಾಡ್ತೀನಿ, ರಾಘವೇಂದ್ರ ಬಿಟ್ಟರೆ ಈ ವಿಜಯೇಂದ್ರಗೆ ಯಾರೂ ಸಪೋರ್ಟ್ ಮಾಡಲ್ಲ, ಜನರಿಗೆ ಗೊತ್ತಿದೆ ಅವನೊಬ್ಬ ದುರಹಂಕಾರಿ, ಹೀಗಾಗಿ ಅವನು ಯಾರಿಗೂ ಆಗಲ್ಲ ಎಂದು ಯತ್ನಾಳ್ ಕಿಡಿ ಕಾಡಿದ್ದಾರೆ. ಅಲ್ಲದೆ ಈ ವಿಜಯೇಂದ್ರನನ್ನ ಕಂಡರೆ ಬಿಜೆಪಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್‌ಗೂ ಆಗಲ್ಲ, ಇವರೆಲ್ಲ ಬೊಮ್ಮಾಯಿ, ಶ್ರೀರಾಮುಲುಗೆ ಅವಮಾನಿಸಿದ್ದಾರೆ. ಆದರೆ ನನ್ನ ಉಚ್ಚಾಟನೆಯ ಹಿಂದೆ ಹೈಕಮಾಂಡ್ ದೊಡ್ಡ ಲೆಕ್ಕಾಚಾರವನ್ನೇ ಹಾಕಿದೆ ಎಂದು ಅವರು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪಗೆ ಬುದ್ದಿ ಕಲಿಸ್ತೀನಿ..
ಅಂದಹಾಗೆ ಇದಕ್ಕೂ ಮೊದಲು ನನಗೆ ಒಂದು ಸೀಮಿತ ಇತ್ತು, ಆದರೆ ಈಗ ಏನೂ ಇಲ್ಲ, ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ, ಹಿಂದುಗಳ ರಕ್ಷಣೆಯ ಜೊತೆಗೆ ಕುಟುಂಬ ರಾಜಕೀಯದ ವಿರುದ್ಧ ನನ್ನ ಹೋರಾಟ ಮುಂದುವರೆಸ್ತೀನಿ. ಮನೆಯಲ್ಲಿದ್ದುಕೊಂಡು ಮಗನನ್ನು ಸಿಎಂ ಮಾಡಲು ಹೊರಟಿರುವ ಯಡಿಯೂರಪ್ಪಗೆ ಬುದ್ದಿ ಕಲಿಸುತ್ತೇನೆ ಎಂದು ಯತ್ನಾಳ್ ಶಪಥ ಮಾಡಿದ್ದಾರೆ.