Tuesday, November 18, 2025

Latest Posts

Political News: ಬಿಜೆಪಿ ಶಾಸಕರ ಅಮಾನತು ಹಿಂಪಡೆಯಿರಿ : ಯತ್ನಾಳ್‌ ಹಾದಿ ಹಿಡೀತಾರಾ ಸಾಮ್ರಾಟ್..?

- Advertisement -

Political News: ಕಳೆದ ಬಜೆಟ್‌ ಅಧಿವೇಶನದಲ್ಲಿ ಕರ್ನಾಟಕ ವಿಧಾನಸಭೆಯ ಸದನದಿಂದ ಅಮಾನತುಗೊಂಡಿರುವ ಬಿಜೆಪಿಯ 18 ಶಾಸಕರ ಅಮಾನತು ವಾಪಸ್‌ ಪಡೆಯುವಂತೆ ವಿಪಕ್ಷ ನಾಯಕ ಆರ್. ಅಶೋಕ್‌ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ತಮ್ಮ ಪಕ್ಷದ ವತಿಯಿಂದ ಸ್ಪೀಕರ್‌ ಭೇಟಿಯಾಗುವ ಮುನ್ನವೇ ಅಶೋಕ್‌ ಅವರು ಯು.ಟಿ.ಖಾದರ್‌ ಅವರಿಗೆ ಬರೆದಿರುವ ಪತ್ರವು ಇದೀಗ ಕೇಸರಿ ಪಾಳಯದಲ್ಲಿ ಕುತೂಹಲ ಮೂಡುವಂತೆ ಮಾಡಿದೆ. ಅಲ್ಲದೆ ರಾಜ್ಯ ಬಿಜೆಪಿ ವತಿಯಿಂದ ಬೆಲೆ ಏರಿಕೆಯ ವಿರುದ್ಧ ಅಹೋರಾತ್ರಿ ಧರಣಿ ಹಾಗೂ ಶಾಸಕರ ಅಮಾನತು ಖಂಡಿಸಿ ಕರೆಯಲಾಗಿದ್ದ ಸಭೆಗೂ ಅಶೋಕ್‌ ಗೈರಾಗಿದ್ದರು.

ಮುಸುಕಿನ ಗುದ್ದಾಟ ಶುರುವಾಯ್ತೇ..?

ಅಲ್ಲದೆ ರಾಜ್ಯದ ವಿರೋಧ ಪಕ್ಷದ ನಾಯಕರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೇಂದ್ರ ನಾಯಕರಿಗೆ ದೂರು ನೀಡಿದ್ದಾರೆ ಎಂಬ ವಿಚಾರವಾಗಿ ಅಶೋಕ್ ಅವರು ಈ ಹಿಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಂತೆ ವಿಜಯೇಂದ್ರ ವಿರುದ್ಧ ಅವರು ಮುಸುಕಿನ ಗುದ್ದಾಟ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ತಮ್ಮ ಅಧ್ಯಕ್ಷರ ನಡೆಯಿಂದ ಬೇಸತ್ತು ಅಶೋಕ್‌ ಅವರು ಯತ್ನಾಳ್‌ ಅವರ ದಾರಿ ತುಳಿಯುತ್ತಾರಾ..? ಎನ್ನುವ ಚರ್ಚೆಗಳು ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿವೆ.

ಇನ್ನೂ ಪ್ರಮುಖವಾಗಿ ವಿಧಾನಸಭೆ ಕಲಾಪದ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ವಿಚಾರದಲ್ಲಿ ಶಾಸಕರ ನಿಲುವಿಗೆ ವಿಪಕ್ಷ ನಾಯಕರು ಸ್ಪಂದಿಸಿಲ್ಲ. ಅಲ್ಲದೆ ಧರಣಿಗೆ ಮುಂದಾದರೆ ಅದಕ್ಕೂ ಅಡ್ಡಿಯಾಗುತ್ತಾರೆ ಎಂಬ ಅತೃಪ್ತಿಯನ್ನು ಶಾಸಕರು ಹಲವು ಬಾರಿ ಹೊರಹಾಕಿದ್ದರು.

ಖಾದರ್‌ಗೆ ಬರೆದ ಪತ್ರದ ಸಾರಾಂಶವೇನು..?

ಕಳೆದ ಮಾರ್ಚ್‌ 23ರಂದು ನಡೆದ ಘಟನೆಯು ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. ನಿಮ್ಮ ಪೀಠಕ್ಕೆ ಅಗೌರವ ತೋರುವ ಇರಾದೆಯೂ ಯಾವುದೇ ಶಾಸಕರಿಗೂ ಇರಲಿಲ್ಲ. ಆದರೆ ಸದನದ ಘನತೆ ಮತ್ತು ಗೌರವವನ್ನು ಉಳಿಸಬೇಕಾಗಿದೆ ಎಂಬ ತತ್ವದಲಿ ನಂಬಿಕೆ ಇಟ್ಟು 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಅಶೋಕ್‌ ತಮ್ಮ ಪತ್ರದಲ್ಲಿ ಸಭ್ಯಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಕೋರಿದ್ದಾರೆ.

ಇನ್ನೂ ಕಳೆದ ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಅತ್ಯಂತ ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ, ಭಾಷೆಯ ಬಳಕೆ, ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೂ ಈ ದಿನಗಳಲ್ಲಿ ಯಾರಿಗೇ ಆಗಲಿ ಇದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ಆ ದಿನ ತಾವು ನಮ್ಮ ಎಲ್ಲ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಕೇಳಿದ್ದರೆ ನಾವು ಈ ಘಟನೆಯ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೆವು. ಅದಕ್ಕೆ ಅವಕಾಶ ಸಿಗಲಿಲ್ಲ. ಅಮಾನತಿನಿಂದಾಗಿ 18 ಶಾಸಕರು ಜನಪ್ರತಿನಿಧಿಯಾಗಿ ಕೆಲಸ ಮಾಡಲು ಹಲವು ನಿರ್ಬಂಧ ವಿಧಿಸಿದಂತಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಕೊಡುವುದಕ್ಕಾಗಿ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಆರ್‌ ಅಶೋಕ್‌ ಅವರು ಯು.ಟಿ.ಖಾದರ್‌ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

- Advertisement -

Latest Posts

Don't Miss