Political News: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಬಿಜೆಪಿಯು ತನಗೆ ಅಗತ್ಯವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಲ್ಲದೆ ಹೇಗಾದರೂ ಮಾಡಿ ಅಡಳಿತಾರೂಢ ಡಿಎಂಕೆಯನ್ನು ಬಗ್ಗು ಬಡಿಯಲೇಬೆಕೆಂಬ ಹಠ ತೊಟ್ಟಿರುವ ಮೋದಿ ಹಾಗೂ ಅಮಿತ್ ಶಾ ಜೋಡಿ ಇದಕ್ಕಾಗಿ ದೊಡ್ಡ ಮಟ್ಟದ ಸಿದ್ದತೆ ನಡೆಸಿದೆ. ಹೀಗಾಗಿ ತಮಿಳುನಾಡಿನ ಅಧಿಕಾರದ ಗದ್ದುಗೆ ಏರಲು ಎಐಎಡಿಎಂಕೆ ಜೊತೆ ದೋಸ್ತಿಗೆ ಮುಂದಾಗಿದೆ. ಈ ಮೂಲಕ ತಮಿಳುನಾಡಿನ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ರಾಜಕೀಯವಾಗಿ ಬಲಿ ಪಡೆಯಲಾಯಿತೇ..? ಎನ್ನುವ ಪ್ರಶ್ನೆಗಳನ್ನು ಹುಟ್ಟುಕಾಕಿದೆ.
ಇನ್ನೂ ತಮಿಳುನಾಡಿನಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿಯ ಮಾತುಕತೆಗಳು ಮುಂದುವರೆದಿದ್ದು, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದರಿಂದ ಉಭಯ ಪಕ್ಷಗಳಲ್ಲಿ ಅಧಿಕಾರದ ಕನಸು ಮತ್ತೊಮ್ಮೆ ಚಿಗುರೊಡೆದಂತಾಗಿದೆ. ಆದರೆ ಪಳನಿಸ್ವಾಮಿ ವಿಧಿಸಿರುವ ಷರತ್ತು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ್ದು, ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಎಐಎಡಿಎಂಕೆ ಷರತ್ತೇನು..?
ಅಂದಹಾಗೆ ಕಳೆದ ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿದ್ದ ಎಐಎಡಿಎಂಕೆ ನಿಯೋಗವು ಅಣ್ಣಾಮಲೈ ಅವರ ಪ್ರಭಾವವನ್ನು ತಗ್ಗಿಸಬೇಕು. ಅವರನ್ನು ಸ್ವಲ್ಪ ದೂರ ಇಡಬೇಕು, ಬಿಜೆಪಿಯು ಅಷ್ಟೊಂದು ಜನರನ್ನು ತಲುಪಿಲ್ಲ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಇನ್ನೂ ಸಹ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಿಸಿಲ್ಲ. ಹೀಗಾಗಿ ತಮ್ಮ ನೇತೃತ್ವದಲ್ಲಿಯೇ ಈ ಚುನಾವಣೆ ನಡೆಯಬೇಕು. ಹೆಚ್ಚಿನ ಪ್ರಾಮುಖ್ಯತೆ ಎಐಎಡಿಎಂಕೆಗೆ ನೀಡಬೇಕು ಎಂಬ ಷರತ್ತನ್ನು ನಿಯೋಗ ವಿಧಿಸಿತ್ತು.
ಡಿಎಂಕೆಗೆ ಗುದ್ದು ನೀಡಲು ಪ್ಲಾನ್..!
ಅಲ್ಲದೆ ಪ್ರಮುಖವಾಗಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುತ್ತಲೇ ಬರುತ್ತಿರುವ ಡಿಎಂಕೆಯು, ಇದೀಗ ಡಿಲಿಮಿಟೇಷನ್, ತ್ರಿಭಾಷಾ ಸೂತ್ರಕ್ಕೆ ಅಡ್ಡಗಾಲು ಹಾಕುತ್ತಿರುವುದನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿಯೇ ಎಐಎಡಿಎಂಕೆ ಜೊತೆ ಸಖ್ಯ ಬೆಳೆಸಿ ಡಿಎಂಕೆಗೆ ಪಾಠ ಕಲಿಸಲು ಬಿಜೆಪಿ ಮುಂದಾಗಿದೆ. ಹೀಗಾಗಿ ಷರತ್ತಿಗೆ ತಲೆಯಾಡಿಸಿ ಅಣ್ಣಾಮಲೈ ಅವರಿಗೆ ಕೊಕ್ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧಿರಿಸಿದೆ. ಹೀಗಾಗಿ ಶೀಘ್ರದಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ಸ್ಥಾನದಲ್ಲಿ ಇನ್ನೊಬ್ಬರನ್ನು ತಂದು ಕೂರಿಸಲು ಬಿಜೆಪಿ ಲೆಕ್ಕಾಚಾರ ಹಾಕಿದೆ.
ಹೈಕಮಾಂಡ್ ಲೆಕ್ಕಾಚಾರ ಏನು..?
ಅಂದಹಾಗೆ ರಾಜೀನಾಮೆಯ ಬಳಿಕ ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಉನ್ನತ ಜವಾಬ್ದಾರಿ ನೀಡುತ್ತದೆ ಎಂಬ ಚರ್ಚೆಗಳು ನಡೆದಿವೆ. ಯಾಕೆಂದರೆ ಈಗಾಗಲೇ ತಮಿಳುನಾಡಿನಲ್ಲಿ ಸುತ್ತಾಡಿ ಬಿಜೆಪಿಯನ್ನು ಕಟ್ಟುವ ಕೆಲಸ ಮಾಡಿರುವ ಅಣ್ಣಾಮಲೈ ಅವರ ಕಾರ್ಯದಕ್ಷತೆ ಹಾಗೂ ಪಕ್ಷ ನಿಷ್ಠೆ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ತೃಪ್ತಿ ತಂದಿದೆ. ಅಲ್ಲದೆ ಈ ಉಭಯ ನಾಯಕರು ಮೆಚ್ಚುವ ಯುವಕರಲ್ಲಿ ಅಣ್ಣಾಮಲೈ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ಒಪ್ಪದ ಹೈಕಮಾಂಡ್, ಅವರಿಗೆ ದೇಶದ ಯಾವುದಾದರೂ ಒಂದು ರಾಜ್ಯದ ಉಸ್ತುವಾರಿ ನೀಡುವ ಚಿಂತನೆ ನಡೆಸಿದೆ. ಈ ಮೂಲಕ ಪಕ್ಷದ ಕಾರ್ಯಗಳಲ್ಲಿ ಅಣ್ಣಾಮಲೈ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಯೋಚಿಸಿದೆ.
ನೈನಾರ್ ನಾಗೇಂದ್ರನ್‌ಗೆ ಪಟ್ಟ..?
ಮುಖ್ಯವಾಗಿ ಎಐಎಡಿಎಂಕೆ ರಾಜ್ಯಾಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಅವರು ಗೌಂಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಅಣ್ಣಾಮಲೈ ಕೂಡ ಅದೇ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಥೆವಾರ್ ಸಮುದಾಯಕ್ಕೆ ಸೇರಿದ ಸಂಸದ ನೈನಾರ್ ನಾಗೇಂದ್ರನ್ ಅವರಿಗೆ ತಮಿಳುನಾಡು ಬಿಜೆಪಿಯ ಸಾರಥ್ಯವನ್ನು ನೀಡುವ ಲಕ್ಷಣಗಳು ದಟ್ಟವಾಗಿವೆ. ಈಗಾಗಲೇ ಈ ಕುರಿತು ಹೈಕಮಾಂಡ್ ಹಂತದಲ್ಲಿ ಹೆಸರು ಅಂತಿಮವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.