Sports News: ಕಳೆದ 18 ವರ್ಷಗಳಿಂದ ಐಪಿಲ್ ಟ್ರೋಫಿಯ ಬರ ಎದುರಿಸುತ್ತಿದ್ದ ಆರ್ಸಿಬಿ ತಂಡವು ಕೊನೆಗೂ ಕಪ್ ಎತ್ತುವಲ್ಲಿ ಯಶಸ್ವಿಯಾಗಿದೆ. ಇದರ ಹಿಂದೆ ಇಡೀ ತಂಡದ ಆಟಗಾರರ ಎಷ್ಟು ಶ್ರಮವಿದೆಯೋ ಅಷ್ಟೆ ಆರ್ಸಿಬಿ ಅಭಿಮಾನಿಗಳ ಪ್ರೀತಿ, ನಿಯತ್ತು ಹಾಗು ತಪಸ್ಸು ಕೂಡ ಅಷ್ಟೇ ಇದೆ. ನಿನ್ನೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಅಂತಿಮವಾಗಿ ಐಪಿಎಲ್‌ಗೆ ಹೊಸ ಚಾಂಪಿಯನ್ ಸಿಕ್ಕಿತು. ಪಂಜಾಬ್ ಕಿಂಗ್ಸ್ ಕೂಡ ಉತ್ತಮವಾಗಿ ಆಡಿದರೂ ಆರ್‌ಸಿಬಿ ಸಾಂಘಿಕ ದಾಳಿಯ ಮುಂದೆ ಮಂಡಿಯೂರಿತು. 18 ವರ್ಷಗಳ ಟ್ರೋಫಿ ಬರವನ್ನು ನೀಗಿಸಿಕೊಂಡ ಬಳಿಕ ಭಾವುಕರಾದ ವಿರಾಟ್ ಕೊಹ್ಲಿ ಈ ಗೆಲುವನ್ನು ಅದ್ಭುತ ಎಂದು ಬಣ್ಣಿಸಿದರು.
ವಿರಾಟ್ ಕೊಹ್ಲಿ ಹೇಳಿದ್ದೇನು?
ಇನ್ನೂ ಕರ್ನಾಟಕದ ದತ್ತು ಪುತ್ರ ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಅಂದರೆ ಕಳೆದ 18 ವರ್ಷಗಳಿಂದ ಆರ್‌ಸಿಬಿಯ ಭಾಗವಾಗಿದ್ದಾರೆ. ಆದರೆ ಇಲ್ಲಿಯವರೆಗೆ ಅವರು ಈ ತಂಡಕ್ಕಾಗಿ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ, 2025ರ ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿಯ ಕಾಯುವಿಕೆಗೆ ತೆರೆ ಬಿದ್ದಿದೆ. ಈ ಗೆಲುವಿನ ನಂತರ ಭಾವುಕರಾಗಿ ಮಾತನಾಡಿದ ವಿರಾಟ್, ‘ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವಾಗಿತ್ತೋ, ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. ನಾನು ನನ್ನ ಯೌವ್ವನ, ನನ್ನ ಅತ್ಯುತ್ತಮವಾದ ನನ್ನ ಅನುಭವವನ್ನು ಈ ತಂಡಕ್ಕೆ ನೀಡಿದ್ದೇನೆ. ಪ್ರತಿ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಲು ಪ್ರಯತ್ನಿಸಿದೆ, ನನ್ನ ಅತ್ಯುತ್ತಮ ಶ್ರಮವನ್ನು ತಂಡಕ್ಕಾಗಿ ನೀಡಿದ್ದೇನೆ ಎಂದು ಭಾವುಕರಾಗಿದ್ದಾರೆ.
ನನ್ನ ಹೃದಯ ಬೆಂಗಳೂರಿನೊಂದಿಗೆ ಇದೆ, ನನ್ನ ಆತ್ಮ ಬೆಂಗಳೂರಿನೊಂದಿಗೆ ಇದೆ..!
ಈ ದಿನ ಬರುತ್ತದೆ ಅಂತ ಎಂದಿಗೂ ಭಾವಿಸಿರಲಿಲ್ಲ, ಗೆದ್ದ ನಂತರ ನಾನು ಎಮೋಷನಲ್ ಆಗಿದ್ದೇನೆ. ಎಬಿ ಡಿವಿಲಿಯರ್ಸ್ ಫ್ರಾಂಚೈಸಿಗಾಗಿ ಮಾಡಿದ್ದು ಅದ್ಭುತವಾಗಿದೆ. ಹೀಗಾಗಿ ನಾನು ಅವರಿಗೆ ಈ ಕಪ್ ನಮ್ಮದ್ದು ಮಾತ್ರವಲ್ಲ ಬದಲಿಗೆ ನಿಮ್ಮದೂ ಕೂಡ ಎಂದು ಹೇಳಿದೆ. ನಾಲ್ಕು ವರ್ಷಗಳ ಹಿಂದೆಯೇ ಡಿವಿಲಿಯರ್ಸ್ ಐಪಿಎಲ್ನಿಂದ ನಿವೃತ್ತರಾಗಿದ್ದರೂ, ಅವರು ಫ್ರಾಂಚೈಸಿಯಲ್ಲಿ ಹೆಚ್ಚಿನ ಬಾರಿ ಪಿಒಟಿಎಂ ಆಗಿದ್ದಾರೆ. ಅವರು ವೇದಿಕೆಯ ಮೇಲೆ ಇದ್ದು ಕಪ್ ಎತ್ತಲು ಅರ್ಹರು. ಈ ಗೆಲುವು ಅವರಿಗೆ ದೊಡ್ಡ ಗೆಲುವು. ನನ್ನ ಹೃದಯ ಬೆಂಗಳೂರಿನೊಂದಿಗೆ ಇದೆ, ನನ್ನ ಆತ್ಮ ಬೆಂಗಳೂರಿನೊಂದಿಗೆ ಇದೆ. ನಾನು ದೊಡ್ಡ ಪಂದ್ಯಾವಳಿಗಳು ಮತ್ತು ಕ್ಷಣಗಳನ್ನು ಗೆಲ್ಲಲು ಬಯಸುತ್ತೇನೆ. ಈ ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ ಎಂದು ಕೊಹ್ಲಿ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ.
ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ಸಿಬಿ..
ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ತಂಡದ ಈ ಸಾಧನೆ ಕುರಿತು ಮಾಜಿ ಮಾಲೀಕ ವಿಜಯ್ ಮಲ್ಯ ತಂಡಕ್ಕೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಹೌದು ನಿನ್ನೆ ಗುಜರಾತಿನ ಅಹಮದಾಬಾದ್ ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ವಿರುದ್ಧ 6 ರಂಗಳ ಭರ್ಜರಿ ಗೆಲುವು ದಾಖಲಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿತು. ಕಳೆದ 18 ವರ್ಷಗಳಿಂದ ಕಪ್ ಬರ ಎದುರಿಸುತ್ತಿದ್ದ ಆರ್ಸಿಬಿ ಇದೀಗ ಆ ಒಂದು ದಾಹವನ್ನು ನೀಗಿಸಿಕೊಂಡಿದೆ.
ಕೊಹ್ಲಿ ಸತತ 18 ವರ್ಷಗಳಿಂದ ನಮ್ಮ ತಂಡದ ಜೊತೆ ಇದ್ದಾರೆ..
ಆರ್ಸಿಬಿ ಕಪ್ ಗೆದ್ದ ಬೆನ್ನಲ್ಲೇ ಮಾಜಿ ಮಾಲಿಕ ವಿಜಯ ಮಲ್ಯ ಮಹತ್ವದ ಸಂದೇಶ ನೀಡಿದ್ದಾರೆ. ಈ ಕುರಿತು ಸರಣಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಮಾಡಿರುವ ವಿಜಯ್ ಮಲ್ಯ, ’18 ವರ್ಷಗಳ ನಂತರ ಆರ್‌ಸಿಬಿ ಅಂತಿಮವಾಗಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಪಂದ್ಯಾವಳಿಯಾದ್ಯಂತ ಅದ್ಭುತ ಪ್ರದರ್ಶನ ನೀಡಲಾಗಿದೆ. ಅತ್ಯುತ್ತಮ ತರಬೇತಿ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉತ್ತಮ ಹೊಂದಾಣಿಕೆಯನ್ನು ಹೊಂದಿರುವ ತಂಡ. ಅನೇಕ ಅಭಿನಂದನೆಗಳು! ಈ ಸಲ ಕಪ್ ನಮ್ದೆ !! ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, ‘ನಾನು ಆರ್‌ಸಿಬಿಯನ್ನು ಸ್ಥಾಪಿಸಿದ್ದ ವೇಳೆ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದಾಗ ದಂತಕಥೆಯ ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡುವ ಸೌಭಾಗ್ಯ ನನಗಿತ್ತು. ಅಲ್ಲದೆ ಅವರು ಸತತ 18 ವರ್ಷಗಳ ಕಾಲ ಆರ್‌ಸಿಬಿಯೊಂದಿಗೆ ಇದ್ದಾರೆ ಎಂಬುದು ಗಮನಾರ್ಹ ಎಂದು ಮಲ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು, ಅವರು ಐಪಿಎಲ್ ಟ್ರೋಫಿಗೆ ಅರ್ಹರು..
ಅಲ್ಲದೆ ಆರ್‌ಸಿಬಿ ಇತಿಹಾಸದಲ್ಲಿ ಅಳಿಸಲಾಗದ ಭಾಗವಾಗಿ ಉಳಿದಿರುವ ಕ್ರಿಸ್ ಗೇಲ್ ಮತ್ತು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡುವ ಗೌರವವೂ ನನಗೆ ಸಿಕ್ಕಿತು. ಅಂತಿಮವಾಗಿ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಆಗಮಿಸುತ್ತಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ಮತ್ತೊಮ್ಮೆ ಧನ್ಯವಾದಗಳು. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು. ಈ ಸಲಾ ಕಪ್ ಬೆಂಗಳೂರಿಗೆ ಬರುತೆ!ಎನ್ನುವ ಮೂಲಕ ವಿಜಯ್ ಮಲ್ಯ ಆರ್ಸಿಬಿ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.