ಎಲ್ಲಿ ನೋಡಿದರೂ ಈಗ ಚೀಟಿ ಕಟ್ಟಿ ಮೋಸ ಹೋದ ಪ್ರಕರಣಗಳೇ ಹೆಚ್ಚಾಗುತ್ತಿವೆ. ಇತ್ತಿಚೀಗಷ್ಟೆ ಬೆಂಗಳೂರಿನಲ್ಲಿ ಬರೋಬ್ಬರಿ 40 ಕೋಟಿ ಚೀಟಿ ದುಡ್ಡು ಎತ್ತಿಕೊಂಡು ದಂಪತಿಗಳು ಎಸ್ಕೇಪ್ ಆಗಿ ಇನ್ನು ಕೂಡ ಪೋಲಿಸರ ಕೈಗೆ ಸಿಕ್ಕಿಲ್ಲ. ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಚಿಟ್‌ಫಂಡ್ ಮತ್ತು ಫೈನಾನ್ಸ್ ವ್ಯವಹಾರದ ಸೋಗಿನಲ್ಲಿ ಜನರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಂತರ ರೂ. ವಂಚಿಸಿ ಕೇರಳ ಮೂಲದ ದಂಪತಿ ಪರಾರಿಯಾಗಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಮೂರ್ತಿನಗರ ನಿವಾಸಿ ಪಿ.ಟಿ. ಸ್ಯಾವಿಯೊ ಎಂಬುವರು ನೀಡಿದ ದೂರು ಆಧರಿಸಿ ಎ.ವಿ. ಟಾಮಿ ಮತ್ತು ಆತನ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್‌ಫಂಡ್ ಕಾಯಿದೆ ಹಾಗೂ ಬಿಎನ್‌ಎಸ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಕೇರಳ ಮೂಲದ ಎ.ವಿ. ಟಾಮಿ ದಂಪತಿಯು ರಾಮಮೂರ್ತಿ ನಗರದಲ್ಲಿ 2005ರಿಂದ ಎ ಆ್ಯಂಡ್ ಎ ಚಿಟ್‌ಫಂಡ್ ಮತ್ತು ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದರು. ದಂಪತಿಯು ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾಕಷ್ಟು ಜನರಿಂದ ಠೇವಣಿ ಹಾಗೂ ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿದ್ದರು. ವರ್ಷಕ್ಕೆ ಶೇ. 15 ರಿಂದ ಶೇ. 20ರಷ್ಟು ಬಡ್ಡಿಯ ಆಸೆ ತೋರಿಸಿದ್ದರು.
ಆರಂಭದಲ್ಲಿ ಜನರ ನಂಬಿಕೆ ಹುಟ್ಟಿಸಲು ಒಂದಿಷ್ಟು ಸಮಯ ಹಣವನ್ನೂ ನೀಡಿದ್ದರು. ಆದರೆ ಇತ್ತೀಚೆಗೆ ಹಣ ಪಾವತಿ ಸ್ಥಗಿತಗೊಂಡಿತ್ತು. ನೋಡಿದಾಗ ದಂಪತಿಯು ಸಂಸ್ಥೆಯ ಬಾಗಿಲು ಮುಚ್ಚಿ, ಮನೆ ಖಾಲಿ ಮಾಡಿ ರಾತ್ರೋ ರಾತ್ರಿ ಕುಟುಂಬ ಸಮೇತ ಪರಾರಿಯಾಗಿದ್ದಾರೆ. ಈ ಸಂಬಂಧ 300ಕ್ಕೂ ಹೆಚ್ಚು ಜನರು ಪೊಲೀಸರಿಗೆ ದೂರು ನೀಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ