ಭಾಗವತ್‌ ಅಶಾಂತಿಯ ಎಚ್ಚರಿಕೆ : ದುಷ್ಟಶಕ್ತಿಗಳ ಬಗ್ಗೆ ಸಂದೇಶ!

ಭಾರತದ ನೆರೆಯ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಅಶಾಂತಿಯ ಪ್ರಮುಖ ಕಾರಣ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕದ ಕೊರತೆ ಹಾಗೂ ಅಸಮರ್ಥ ಆಡಳಿತವೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಎಚ್ಚರಿಸಿದ್ದಾರೆ. ಭಾರತದಲ್ಲೂ ಇಂತಹ ಅಶಾಂತಿಯನ್ನು ಬಯಸುವ ಶಕ್ತಿಗಳು ಸಕ್ರಿಯವಾಗಿವೆ ಎಂದು ಅವರು ಎಚ್ಚರಿಕೆ ನೀಡಿದರು.

ನಾಗಪುರದ ರೇಶಿಂಬಾಗ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ವಿಜಯದಶಮಿ ಹಾಗೂ ಶತಮಾನೋತ್ಸವ ಸಮಾರಂಭದಲ್ಲಿ ಭಾಗವತ್ ಮಾತನಾಡಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಗಲಭೆಗಳಂತೆ ಭಾರತದಲ್ಲಿಯೂ ಕೆಲ ಒಳಗಿನ ಹಾಗೂ ಹೊರಗಿನ ಶಕ್ತಿಗಳು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಆ ದೇಶಗಳಲ್ಲಿ ಗಲಭೆಗೆ ಸರ್ಕಾರ ಮತ್ತು ಜನರ ನಡುವಿನ ಸಂಪರ್ಕದ ಕೊರತೆ ಹಾಗೂ ದುರ್ಬಲ ಆಡಳಿತ ಕಾರಣವಾಗಿತ್ತು. ಹಿಂಸೆಯಿಂದ ಯಾವುದೇ ಸಕಾರಾತ್ಮಕ ಬದಲಾವಣೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ. ಆದ್ದರಿಂದ ಸರ್ಕಾರಗಳು ಮತ್ತು ಜನರ ನಡುವೆ ಸಂಪರ್ಕ ಕಡಿತವಾಗದಂತೆ ಜಾಗರೂಕರಾಗಿರಬೇಕು ಎಂದು ಹೇಳಿದರು.

ಪಹಲ್ಗಾಂ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಅವರು, 26 ಭಾರತೀಯರನ್ನು ಅವರ ಧರ್ಮ ಆಧರಿಸಿ ಕೊಂದ ಘಟನೆಯು ಅಪಾರ ನೋವು ಮತ್ತು ಕೋಪವನ್ನು ಉಂಟುಮಾಡಿದೆ. ಭಾರತವು ಎಲ್ಲ ದೇಶಗಳೊಂದಿಗೆ ಸ್ನೇಹ ಸಂಬಂಧ ಉಳಿಸಿಕೊಂಡಿದ್ದರೂ, ಭದ್ರತಾ ವಿಚಾರದಲ್ಲಿ ಹೆಚ್ಚಾದ ಎಚ್ಚರಿಕೆ ಅಗತ್ಯ. ಈ ದಾಳಿಯ ನಂತರ ಇತರ ರಾಷ್ಟ್ರಗಳ ನಿಲುವುಗಳು ಯಾರು ನಿಜವಾದ ಸ್ನೇಹಿತರು ಎಂಬುದನ್ನು ಸ್ಪಷ್ಟಪಡಿಸಿವೆ ಎಂದರು.

ಹಿಂದೂ ಸಮಾಜದ ಶಕ್ತಿ ಮತ್ತು ಏಕತೆಯನ್ನು ಉಲ್ಲೇಖಿಸಿದ ಭಾಗವತ್‌, ಹಿಂದೂ ಸಮಾಜ ಹೊಣೆಗಾರಿಕೆಯುಳ್ಳ ಸಮಾಜ. ಇಲ್ಲಿ ನಾವು ಮತ್ತು ಅವರು ಎಂಬ ವಿಭಜನೆಗೆ ಅವಕಾಶವಿಲ್ಲ. ಒಡೆದ ಮನೆ ಎಂದಿಗೂ ಒಗ್ಗಟ್ಟಾಗಲಾರದು. ವಿವಿಧ ಆಕ್ರಮಣಗಳು ನಡೆದರೂ ನಮ್ಮ ಸಂಸ್ಕೃತಿಯ ಶಕ್ತಿಯಿಂದ ನಾವು ಅವುಗಳನ್ನು ತಡೆದು ನಿಂತಿದ್ದೇವೆ ಎಂದು ಹೇಳಿದರು. ಆತ್ಮನಿರ್ಭರತೆ ಬಗ್ಗೆ ಒತ್ತು ನೀಡಿದ ಅವರು, ಸ್ವದೇಶಿ ಮತ್ತು ಸ್ವಾವಲಂಬನೆ ನಮ್ಮ ಗುರಿಯಾಗಬೇಕು. ಜಾಗತಿಕ ವ್ಯವಸ್ಥೆಯ ಮೇಲೆ ಸಂಪೂರ್ಣ ಅವಲಂಬನೆಯಾಗದೆ, ಸ್ವಯಂ ಶಕ್ತಿಯನ್ನು ವೃದ್ಧಿಸಬೇಕು ಎಂದು ಹತ್ತಿರದ ಭವಿಷ್ಯಕ್ಕೆ ಸ್ಪಷ್ಟ ಸಂದೇಶ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author