ಮನೆಯಲ್ಲಿ ಹೊಸ ಮಗು ಬಂದಾಗ ಎಲ್ಲರೂ ಖುಷಿಯಿಂದ ಸಂಭ್ರಮಿಸುತ್ತಾರೆ. ಆದರೆ ಆ ಸಂತೋಷದ ನಡುವೆ ಬಾಣಂತಿಯ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಜನರು ಗಮನ ಹರಿಸುತ್ತಿಲ್ಲ. ಹೆರಿಗೆಯ ನಂತರ ಶೇ.85ರಷ್ಟು ಮಹಿಳೆಯರು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾರೆ. ಇದನ್ನು ವೈದ್ಯಕೀಯವಾಗಿ “ಪೋಸ್ಟ್‌ಪಾರ್ಟಮ್ ಡಿಪ್ರೆಷನ್” ಅಥವಾ “ಬೇಬಿ ಬ್ಲೂಸ್” ಎಂದು ಕರೆಯುತ್ತಾರೆ.
ಹೆರಿಗೆಯ ನಂತರ ಮಹಿಳೆಯ ದೇಹ ಮತ್ತು ಮನಸ್ಸಿನಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುತ್ತವೆ. ಮಗುವಿನ ಆರೈಕೆ, ನಿದ್ರೆಯ ಕೊರತೆ, ಆಹಾರ ನಿಯಮಗಳು, ಶಾರೀರಿಕ ನೋವು – ಇವೆಲ್ಲವೂ ಸೇರಿ ಆಕೆಯ ಮೇಲೆ ಒತ್ತಡ ಉಂಟುಮಾಡುತ್ತವೆ. ಎಲ್ಲರ ಗಮನ ಮಗುವಿನತ್ತ ಇರುವುದರಿಂದ ತಾಯಿಗೆ “ನನ್ನ ಬಗ್ಗೆ ಯಾರೂ ಕಾಳಜಿ ತೋರಿಸುತ್ತಿಲ್ಲ” ಎಂಬ ಭಾವನೆ ಉಂಟಾಗಬಹುದು. ಈ ಅಸಮಾಧಾನ ಖಿನ್ನತೆಗೆ ಕಾರಣವಾಗುತ್ತದೆ.
ಬೇಬಿ ಬ್ಲೂಸ್ ಸಾಮಾನ್ಯವಾಗಿ ಹೆರಿಗೆಯ ನಂತರದ ಮೊದಲ ಎರಡು ವಾರಗಳಲ್ಲಿ ಕಾಣಿಸಿಕೊಳ್ಳುವ ತಾತ್ಕಾಲಿಕ ಮನೋಭಾವ ಬದಲಾವಣೆ. ಈ ಸಮಯದಲ್ಲಿ ತಾಯಂದಿರಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಆತಂಕ, ಅಳುವು, ಭಯ, ಕೋಪ ಅಥವಾ ಮಗುವಿನ ಬಗ್ಗೆ ಅಸಹಜ ಭಾವನೆಗಳು ಕಂಡುಬರುತ್ತವೆ. ಆದರೆ ಹಾರ್ಮೋನ್‌ಗಳು ನಿಧಾನವಾಗಿ ಸಮತೋಲನಕ್ಕೆ ಬಂದಂತೆ ಈ ಸ್ಥಿತಿಯೂ ಸರಿಯಾಗುತ್ತದೆ.
ಆದರೆ ಕೆಲ ಮಹಿಳೆಯರಲ್ಲಿ ಈ ಖಿನ್ನತೆ ದೀರ್ಘಕಾಲ ಮುಂದುವರಿದರೆ ಅದು “ಪೋಸ್ಟ್‌ಪಾರ್ಟಮ್ ಡಿಪ್ರೆಷನ್” ಆಗಿ ತೀವ್ರವಾಗಬಹುದು. ಹೆರಿಗೆಯಾಗಿ ಒಂದು ತಿಂಗಳಾದರೂ ಡಿಪ್ರೆಷನ್, ಮೂಡ್ ಸ್ವಿಂಗ್, ಅಥವಾ ನಿದ್ರೆ ತೊಂದರೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಅಥವಾ ಕೌನ್ಸೆಲಿಂಗ್ ಅಗತ್ಯ. ಇದು ಕೆಲವೊಮ್ಮೆ ಅನುವಂಶಿಕವಾಗಿಯೂ ಇರಬಹುದು ಎಂದು ತಜ್ಞರು ಹೇಳುತ್ತಾರೆ.
ಪ್ರಸವಾ ನಂತರದ ಖಿನ್ನತೆಯ ಪ್ರಮುಖ ಲಕ್ಷಣಗಳಲ್ಲಿ ಆತಂಕ, ದುಃಖ, ಕೋಪ, ಕಿರಿಕಿರಿ, ನಿದ್ರಾಹೀನತೆ ಸೇರಿವೆ. ಈ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಮನೆಯವರು ತಾಯಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು, ಆಕೆಗೆ ಪ್ರೀತಿ ಮತ್ತು ಕಾಳಜಿ ತೋರಬೇಕು. ಹೊಸ ತಾಯಿಗೆ ಶಾರೀರಿಕ ವಿಶ್ರಾಂತಿ, ಪ್ರೋತ್ಸಾಹ ಮತ್ತು ಮನೋಬಲ ನೀಡಿದರೆ ಆಕೆ ಬೇಗ ಚೇತರಿಸಿಕೊಳ್ಳಬಹುದು.
ವರದಿ : ಗಾಯತ್ರಿ ಗುಬ್ಬಿ




