Political News: ಇಂದಿನ ಅಧಿವೇಶನದಲ್ಲಿ ನಡೆದ ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿ ತಮ್ಮ ಭಾಷಣವನ್ನ ಮಂಡಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಅನುಚಾನವಾಗಿ ಪಾಲಿಸಿದ್ದಾರೆ ಎಂದು ರಾಜ್ಯಪಾಲರ ಪರ ಅಶೋಕ್ ಬ್ಯಾಟ್ ಬೀಸಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿ ಸಂವಿಧಾನಕ್ಕೆ, ರಾಜ್ಯಪಾಲರಿಗೆ, ಸದನಕ್ಕೆ ಅಗೌರವ ತೋರಿದ್ದಾರೆ. ಸದನದ ಸಂಪ್ರದಾಯ ಹಾಗೂ ನಿಯಮಾವಳಿಗಳನ್ನ ಗಾಳಿಗೆ ತೂರಿ ರಾಜ್ಯಪಾಲರ ಭಾಷಣಕ್ಕೆ ಮೂಲಕ ಅಡ್ಡಿ ಪಡಿಸುವ ಮೂಲಕ ಸದನಕ್ಕೆ ಅಪಮಾನ ಎಸಗಿದ್ದಾರೆ.
ಸದನದ ಹಿರಿಯ ಸದಸ್ಯರು ಹಾಗೂ ಕಾನೂನು ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಕಾನೂನು ಸಚಿವ ಶ್ರೀ ಹೆಚ್.ಕೆ.ಪಾಟೀಲ್ ಅವರಿಗೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವ ಅರ್ಹತೆ ಇಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇಷ್ಟಕ್ಕೂ ರಾಜ್ಯಪಾಲರು ಈ ರೀತಿ ತಮ್ಮ ಭಾಷಣವನ್ನ ಪೂರ್ತಿ ಓದದೆ ಕೇವಲ ಸಾಂಕೇತಿಕವಾಗಿ ಮಂಡಿಸಿ ಹೊರಟಿರುವುದು ಇದೇನು ಮೊದಲಲ್ಲ. ಈ ಹಿಂದೆ ಮಾಜಿ ರಾಜ್ಯಪಾಲರುಗಳಾದ ಶ್ರೀ ಖುರ್ಷಿದ್ ಆಲಂ ಖಾನ್ ಹಾಗೂ ಶ್ರೀ ಹಂಸರಾಜ್ ಭಾರಧ್ವಾಜ್ ಅವರು ಈ ರೀತಿ ಮಾಡಿರುವ ಉದಾಹರಣೆಗಳಿವೆ. ಆಗಲೂ ಸಹ ಅವರ ಭಾಷಣದ ನಂತರ ಸಂಪ್ರದಾಯಂದತೆ ರಾಷ್ಟ್ರಗೀತೆ ಹಾಡಿ ಗೌರವಯುತವಾಗಿ ಬೀಳ್ಕೊಡಲಾಗಿತ್ತು. ಆದರೆ ಇಂದು ರಾಜ್ಯಪಾಲರು ಭಾಷಣ ಮಂಡಿಸಿದ ನಂತರ ರಾಷ್ಟ್ರಗೀತೆಯನ್ನೂ ನುಡಿಸಲಿಲ್ಲ ಮತ್ತು ರಾಜ್ಯಪಾಲರನ್ನು ಗೌರವಯುತವಾಗಿ ಬೀಳ್ಕೊಡಲೂ ಇಲ್ಲ. ಇದು ಸಂವಿಧಾನ, ರಾಜ್ಯಪಾಲರ ಹುದ್ದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ರಾಷ್ಟ್ರಗೀತೆಗೆ ಮಾಡಿರುವ ಘೋರ ಅಪಮಾನ ಎಂದು ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ..




