ಸಮಸ್ಯೆ ಇದ್ದಲ್ಲಿ ನನ್ನನ್ನು ವ್ಯಂಗ್ಯ ಮಾಡಿ, ನನ್ನೂರಿನ ಮಕ್ಕಳನ್ನಲ್ಲ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಬೇಸರ

Political News: ಇಂದು ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದಿದೆ. ಈ ಕಾರಣಕ್ಕೆ ಟಾಂಗ್ ನೀಡುವ ರೀತಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು.

ಈ ಟ್ವೀಟ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೋಪವಿದ್ದಲ್ಲಿ ನನ್ನನ್ನು ವ್ಯಂಗ್ಯ ಮಾಡಿ, ನನ್ನೂರಿನ ಮಕ್ಕಳನ್ನಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ, ಅವರ ಆತ್ಮಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ, ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಶೇಕಡಾವಾರು ಫಲಿತಾಂಶ 85% ಇರಬಹುದು, ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ, ರಾಜ್ಯದಲ್ಲೂ ಮತ್ತು ಕಲಬುರಗಿ ಜಿಲ್ಲೆಯಲ್ಲೂ… ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಮಾಡಿಕೊಳ್ಳುವ ಶಕ್ತಿ ನಮ್ಮ ಜಿಲ್ಲೆಯ ಮಕ್ಕಳಲ್ಲಿದೆ, ಮತ್ತು ಅದು ಸಾಧ್ಯವಾಗುತ್ತದೆ ಕೂಡ. ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸುತ್ತಿರುವ ಬಿಜೆಪಿ ರಾಜಕೀಯ ದಿವಾಳಿತನದೊಂದಿಗೆ ನೈತಿಕ ಪ್ರಜ್ಞೆಯೂ ದಿವಾಳಿಯಾಗಿರುವುದನ್ನು ನಿರೂಪಿಸುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿನ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮಕ್ಕಳಿಗೂ “ದಡ್ಡರು” ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ? ಜಿಲ್ಲೆಯ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವಂತಹ ಮಾತುಗಳನ್ನಾಡುತ್ತಿರುವ ಬಿಜೆಪಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದು ನಾಡಿನ ದುರಂತ. ಕಲಬುರಗಿ ಜಿಲ್ಲೆಯ ಮಕ್ಕಳ ಶ್ರಮವನ್ನು, ಅವರ ಬೌದ್ಧಿಕ ಸಾಮರ್ಥ್ಯವನ್ನು ಅವಮಾನಿಸುವ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author