ಬೆಂಗಳೂರು ನಗರದ ಆಡುಗೋಡಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಪೂಜಾ ದತ್ತಾ ಎಂಬ ಯುವತಿಯ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮನೆಯನ್ನು ಪರಿಶೀಲಿಸಿದಾಗ, ಮನೆಯ ಗೋಡೆಗಳ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ ಅನೇಕ ಚೀಟಿಗಳನ್ನ ಅಂಟಿಲಾಗಿತ್ತು. ಕೆಲವು ವಿಚಿತ್ರ ಚಿತ್ರಗಳೂ ಕಂಡುಬಂದಿವೆ. ಮನೆಯ ಒಂದು ಕೊಠಡಿ ಸಂಪೂರ್ಣ ಕಸದ ರಾಶಿ ಮತ್ತು ಹರಿದ ಕಾಗದಗಳಿಂದ ತುಂಬಿಕೊಂಡಿತ್ತು. ಇದರಿಂದ ಪೂಜಾ ಮಾನಸಿಕ ಖಿನ್ನತೆಗೆ ಒಳಗಾಗಿರಬಹುದು ಎಂದು ಅನುಮಾನಿಸಲಾಗಿದೆ. ಜಾರ್ಖಂಡ್ ಮೂಲದ ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ಆಡುಗೋಡಿಯಲ್ಲಿ ವಾಸವಿದ್ದಳು. ಕಳೆದ ಮೂರು ದಿನಗಳಿಂದ ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಮನೆ ಮಾಲೀಕರು ಬಾಗಿಲು ಒಡೆದು ನೋಡಿದಾಗ, ಪೂಜಾಳ ಮೃತದೇಹ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರ ಪ್ರಕಾರ, ಪೂಜಾ ಆಗಾಗ ಒಬ್ಬಳೇ ಮಾತನಾಡುತ್ತಾ ಓಡಾಡುತ್ತಿದ್ದಳು ಮತ್ತು ಮಾನಸಿಕವಾಗಿ ಅಸ್ವಸ್ಥಳಾದಂತೆ ಕಾಣಿಸುತ್ತಿದ್ದಳು ಎನ್ನುವ ಮಾಹಿತಿ ಹೊರಬಿದ್ದಿದೆ. ಮತ್ತೊಂದೆಡೆ, ಒಬ್ಬ ಅಪರಿಚಿತ ಯುವಕ ಅವಳ ಮನೆಗೆ ಆಗಾಗ ಬರುತ್ತಿದ್ದನೆಂಬ ಮಾಹಿತಿ ಕೂಡ ಹೊರಬಂದಿದ್ದು, ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಪೂಜಾಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಕಾಲ್ ಡೀಟೈಲ್ ರೆಕಾರ್ಡ್ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಸಾಧ್ಯತೆಯನ್ನು ತಳ್ಳಿಹಾಕದೆ ತನಿಖೆ ಮುಂದುವರೆದಿದ್ದು, ಈ ನಿಗೂಢ ಸಾವಿನ ಹಿಂದಿನ ಸತ್ಯ ಅನಾವರಣಗೊಳ್ಳಬೇಕಿದೆ.




