ಹಿರಾನಿ-ಆಮೀರ್ ಖಾನ್ ಸಿನಿಮಾಗೆ ಬಂತು ಬಿಗ್ ಟ್ವಿಸ್ಟ್!

ರಾಜ್‌ಕುಮಾರ್ ಹಿರಾನಿ ನಿರ್ದೇಶನದ, ಆಮೀರ್ ಖಾನ್ ಅಭಿನಯದ ‘3 ಇಡಿಯಟ್ಸ್’ ಕೇವಲ ಒಂದು ಸಿನಿಮಾ ಅಲ್ಲ, ಅದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ಒಂದು ಎಮೋಷನ್. ಈಗ ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಹಿರಾನಿ ಅವರು ಈ ಸೂಪರ್ ಹಿಟ್ ಚಿತ್ರದ ಸೀಕ್ವೆಲ್‌ಗಾಗಿ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಆಮೀರ್ ಖಾನ್ ಕೂಡ ಇತ್ತೀಚಿನ ಸಂದರ್ಶನವೊಂದರಲ್ಲಿ ಸೀಕ್ವೆಲ್ ಬಗ್ಗೆ ಪಾಸಿಟಿವ್ ಸಿಗ್ನಲ್ ನೀಡಿದ್ದರು.

ಈ ಸೀಕ್ವೆಲ್‌ನ ಅತಿದೊಡ್ಡ ಟ್ವಿಸ್ಟ್ ಎಂದರೆ ‘ನಾಲ್ಕನೇ ಇಡಿಯಟ್’ ಎಂಟ್ರಿ. ವರದಿಗಳ ಪ್ರಕಾರ, ಈ ಹೊಸ ಪಾತ್ರಕ್ಕಾಗಿ ಹಿರಾನಿ ಅವರ ನೆಚ್ಚಿನ ನಟ ವಿಕ್ಕಿ ಕೌಶಲ್ ಅವರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಹಿರಾನಿ ಜೊತೆ ‘ಸಂಜು’ ಮತ್ತು ‘ಡಂಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ ವಿಕ್ಕಿ, ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಮತ್ತೆ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ಜೋರಾಗಿದೆ. ಪ್ರಾಥಮಿಕ ಹಂತದ ಮಾತುಕತೆ ಕೂಡ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಕಥೆಯ ಹಂದರ ಈ ಬಾರಿ ಇನ್ನೂ ರೋಚಕವಾಗಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಸಿನಿಮಾದ ಘಟನೆಗಳ ಸುಮಾರು 10 ವರ್ಷಗಳ ನಂತರ, ಆಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಪಾತ್ರಗಳ ಜೀವನ ಹೇಗೆ ಬದಲಾಗಿದೆ ಮತ್ತು ಆ ಲೈಫ್‌ಗೆ ಹೊಸ ‘ಇಡಿಯಟ್’ ಎಂಟ್ರಿಯಾದರೆ ಯಾವ ರೀತಿಯ ಕಾಮಿಡಿ ಹಾಗೂ ಕಾನ್ಫ್ಲಿಕ್ಟ್ ಮೂಡುತ್ತದೆ ಎಂಬುದೇ ಈ ಭಾಗದ ಹೈಲೈಟ್ ಆಗಲಿದೆ.

ರಾಜ್‌ಕುಮಾರ್ ಹಿರಾನಿ ಮತ್ತು ಸಹಲೇಖಕ ಅಭಿಜಾತ್ ಜೋಶಿ ಪ್ರಸ್ತುತ ಸ್ಕ್ರಿಪ್ಟ್‌ನ್ನು ಫೈನಲ್ ಮಾಡುವ ಹಂತದಲ್ಲಿದ್ದು, 2027ರ ವೇಳೆಗೆ ಚಿತ್ರೀಕರಣ ಆರಂಭಿಸುವ ಯೋಜನೆ ಇದೆ ಎಂದು ತಿಳಿದುಬಂದಿದೆ. ಹಳೆಯ ತಂಡಕ್ಕೆ ಹೊಸ ತಾರೆ ಸೇರ್ಪಡೆಯಾಗುತ್ತಿರುವ ಈ ಬೆಳವಣಿಗೆ ಬಾಲಿವುಡ್‌ನಲ್ಲಿ ಈಗಾಗಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ಒಟ್ಟಾರೆ, ವಿಕ್ಕಿ ಕೌಶಲ್ ಈ ಗ್ಯಾಂಗ್‌ಗೆ ಸೇರಿದರೆ ‘3 ಇಡಿಯಟ್ಸ್’ ಹೈಪ್ ಮತ್ತೊಂದು ಲೆವೆಲ್‌ಗೆ ಹೋಗುವುದು ಖಚಿತ ಎಂದು ಸಿನಿಪ್ರೇಮಿಗಳು ಅಭಿಪ್ರಾಯಪಡುತ್ತಿದ್ದಾರೆ.

About The Author