ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ IPL ಫೈನಲ್ ಮತ್ತು ಪ್ಲೇಆಫ್ ಪಂದ್ಯಗಳು ಈಗ ಅಹಮದಾಬಾದ್ಗೆ ಶಿಫ್ಟ್ ಆಗಿರುವ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯ ಕೈತಪ್ಪಿದ ಬೆನ್ನಲ್ಲೇ ವಿವಿಐಪಿ ಟಿಕೆಟ್ ಪಾಲಿಟಿಕ್ಸ್ ಎಂಬ ಆರೋಪ ಕೂಡ ಭಾರೀ ಸದ್ದು ಮಾಡುತ್ತಿದೆ. ಈ ವಿವಾದದ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಟಿಕೆಟ್ ಬೇಡಿಕೆಗೂ ಪಂದ್ಯ ಸ್ಥಳಾಂತರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ʼಇದು ಸಂಪೂರ್ಣ ಸುಳ್ಳು ಸುದ್ದಿ. ಬೇರೆ ಸ್ಟೇಡಿಯಂಗಳಲ್ಲಿ ಇನ್ನೂ ಹೆಚ್ಚು ಸೀಟುಗಳು ಲಭ್ಯವಿರುತ್ತವೆ. ಬಹುಶಃ ದೊಡ್ಡ ಸಾಮರ್ಥ್ಯದ ಸ್ಟೇಡಿಯಂ ಕಾರಣಕ್ಕೆ ಪಂದ್ಯಗಳನ್ನು ಸ್ಥಳಾಂತರ ಮಾಡಿರಬಹುದು. ಬಿಸಿಸಿಐ ಅಧಿಕೃತವಾಗಿ ಏನು ಹೇಳುತ್ತದೋ ಅದಕ್ಕೆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆʼ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿದ ಹಿನ್ನೆಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕೂಡ ಅಸಮಾಧಾನ ಹೊರಹಾಕಿದೆ. IPL ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆಗಳ ವರದಿ BCCIಗೆ ಸಲ್ಲಿಸಲಾಗಿತ್ತು. ಆದರೂ KSCA ಮನವಿಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ಬೇಸರ ವ್ಯಕ್ತಪಡಿಸಿದೆ. ಈ ವಿಚಾರಕ್ಕೆ ರಾಜಕೀಯ ಟಚ್ ಕೂಡ ಸಿಕ್ಕಿದೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಶಾಸಕರ ಫ್ರೀ ಟಿಕೆಟ್ ಕ್ರೇಜ್ನಿಂದಲೇ ಪಂದ್ಯ ಬೆಂಗಳೂರಿನಿಂದ ಹೋಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ತಮ್ಮ ʼX-ಖಾತೆಯʼ ಪೋಸ್ಟ್ನಲ್ಲಿ ಕ್ರಿಕೆಟ್ ಸ್ಟೇಡಿಯಂ ಇರೋದು ಅಭಿಮಾನಿಗಳಿಗಾಗಿ. ಉಚಿತ ಟಿಕೆಟ್ ಬೇಡಿಕೆಗಾಗಿ ಅಲ್ಲ. BCCI ತೆಗೆದುಕೊಂಡಿರುವ ನಿರ್ಧಾರ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಇಮೇಜ್ಗೆ ಡ್ಯಾಮೇಜ್ ಆಗಿದೆ. ಎಂದು ಕಿಡಿಕಾರಿದ್ದಾರೆ.
ಈ ಆರೋಪಕ್ಕೆ ಕಾರಣವೂ ಇದೆ. ಈ ಹಿಂದೆ ವಿಧಾನಸಭೆಯಲ್ಲೇ ಕೆಲವು ಶಾಸಕರು IPL ಫ್ರೀ ಟಿಕೆಟ್ ವಿಚಾರ ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಆರಂಭಿಸಿದ ಚರ್ಚೆಗೆ ವಿವಿಧ ಪಕ್ಷಗಳ ಶಾಸಕರು ಸಹಮತ ಸೂಚಿಸಿದ್ದರೆ, ಜೆಡಿಎಸ್ ಸದಸ್ಯ ಶರವಣ ಕೂಡ ಇದೇ ಬೇಡಿಕೆ ಇಟ್ಟಿದ್ದರು. ಇದೀಗ ಅದೇ ವಿಚಾರ ಮತ್ತೆ ವೈರಲ್ ಆಗಿದೆ. ಒಟ್ಟಾರೆ, IPL ಪಂದ್ಯ ಶಿಫ್ಟ್ ಆಗಿದ್ದು ಕ್ರಿಕೇಟ್ ಪ್ರೀಯರಿಗೆ ದೊಡ್ಡ ಆಘಾತ ತಂದಿದೆ.




