Hubli News: ನನ್ನ ಸಾವಿಗೆ ಪತ್ನಿ ಮತ್ತು ಪೊಲೀಸರೇ ಕಾರಣ: ಡೆತ್ ನೋಟ್ ಬರೆದು ವ್ಯಕ್ತಿ ಆತ್ಮಹ*ತ್ಯೆ

Hubli News: ಕೌಟುಂಬಿಕ ಕಲಹ, ಪತ್ನಿ ಹಾಗೂ ಪೊಲೀಸರ ಕಿರುಕುಳದ ಆರೋಪದ ನಡುವೆ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿ ತನ್ನ ಸಾವಿಗೆ ಪತ್ನಿ ಹಾಗೂ ಮಹಿಳಾ ಠಾಣೆ ಪೊಲೀಸರೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಹುಬ್ಬಳ್ಳಿಯ ಬೆಂಗೇರಿ ಹರಿಜನ ಕಾಲೋನಿಯ ನಿವಾಸಿ 39 ವರ್ಷದ ಸಂತೋಷ್ ಅಳ್ಳೂರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಸಂತೋಷ್ ತನ್ನ ಸಾವಿಗೆ ಪತ್ನಿ ಲಲಿತಾ ಅಳ್ಳೂರು ಹಾಗೂ ಮಹಿಳಾ ಠಾಣೆ ಪೊಲೀಸರ ಕಿರುಕುಳ ಕಾರಣ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸುಮಾರು 18 ವರ್ಷಗಳ ಹಿಂದೆ ಸಂತೋಷ್ ಹಾಗೂ ಲಲಿತಾ ಪ್ರೀತಿಸಿ ವಿವಾಹವಾಗಿದ್ದು, ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಸಂತೋಷ್ ತನ್ನ ಪತ್ನಿಗೆ ಅಂಗನವಾಡಿಯಲ್ಲಿ ಉದ್ಯೋಗ ದೊರಕುವಂತೆ ಸಹಾಯ ಮಾಡಿದ್ದನು ಎನ್ನಲಾಗಿದ್ದು, ಉದ್ಯೋಗ ಖಾಯಂ ಆದ ಬಳಿಕ ಪತ್ನಿಯ ವರ್ತನೆ ಬದಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವಿಚಾರವಾಗಿ ದಂಪತಿಗಳ ನಡುವೆ ನಿರಂತರ ಕಲಹ ನಡೆಯುತ್ತಿದ್ದು, ಲಲಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಳು ಎಂದು ತಿಳಿದುಬಂದಿದೆ. ಪತ್ನಿ ತನ್ನೊಂದಿಗೆ ಸಂಸಾರ ನಡೆಸುತ್ತಿಲ್ಲ ಎಂಬ ಕಾರಣದಿಂದ ಸಂತೋಷ್ ಮಾನಸಿಕವಾಗಿ ನೊಂದಿದ್ದನು ಎನ್ನಲಾಗಿದ್ದು, ಈ ಎಲ್ಲ ಬೆಳವಣಿಗೆಗಳ ನಡುವೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಬಳಿಕ ಕುಟುಂಬಸ್ಥರು ಪತ್ನಿ ಹಾಗೂ ಮಹಿಳಾ ಠಾಣೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author