Hubli News: ಕಾಡು ಬೆಳಸಿ, ನಾಡು ಉಳಿಸಿ… ಮನೆಗೊಂದು ಮರ, ಊರಿಗೊಂದು ವನ ಎಂಬ ಘೋಷಣೆಗಳು ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿವೆಯೇ ಎಂಬ ಪ್ರಶ್ನೆ ಈಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಕಾಡುತ್ತಿದೆ. ದೇಶದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯ ಎದುರಿಸುತ್ತಿರುವ ನಗರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಪಾಲಿಕೆ, ಸಸಿ ನೆಡುವ ವಿಚಾರದಲ್ಲಿ ನಿರಾಸಕ್ತಿ ತೋರಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕೋಟಿ ಕೋಟಿ ರೂಪಾಯಿ ಅನುದಾನ, ಸಾವಿರಾರು ಸಸಿಗಳ ಲಭ್ಯತೆ ಇದ್ದರೂ ಹಸಿರು ನಗರ ನಿರ್ಮಾಣದ ಕನಸು ಮಾತ್ರ ಕಾಗದದಲ್ಲೇ ಉಳಿದಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸರ ಸಮತೋಲನ ಕಾಪಾಡಲು ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಡುವ ಅಗತ್ಯವಿದೆ. ಆದರೆ ಮರಗಳನ್ನು ಬೆಳೆಸಬೇಕಾದ ಮಹಾನಗರ ಪಾಲಿಕೆ ಈ ಕೆಲಸದಲ್ಲಿ ನಿರೀಕ್ಷಿತ ಮಟ್ಟದ ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿಂದಿನ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ನಗರದಲ್ಲಿ ಒಂದು ಲಕ್ಷ ಮರಗಳನ್ನು ಬೆಳೆಸುವ ಗುರಿ ಘೋಷಿಸಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ನೆಡಲಾಗಿರುವುದು ಕೇವಲ 15 ಸಾವಿರ ಸಸಿಗಳು ಮಾತ್ರ ಎನ್ನಲಾಗುತ್ತಿದೆ. ಗುರಿಯ ಶೇಕಡಾವಾರು ಭಾಗವನ್ನೂ ತಲುಪದಿರುವುದು ಪ್ರಶ್ನೆ ಹುಟ್ಟಿಸಿದೆ.
ಅರಣ್ಯ ಇಲಾಖೆಯಿಂದ 25 ಸಾವಿರ ಸಸಿಗಳನ್ನು ಪಡೆಯಲು ಈಗಾಗಲೇ ಅನುದಾನ ಮಂಜೂರಾಗಿದ್ದರೂ, ಆ ಸಸಿಗಳನ್ನು ಪಡೆದು ನೆಡುವ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎನ್ನಲಾಗಿದೆ. ಮತ್ತೊಂದೆಡೆ ಪ್ರತಿ ವರ್ಷ ಸುಮಾರು ಮೂರು ಕೋಟಿ ರೂಪಾಯಿ ಉದ್ಯಾನಗಳ ನಿರ್ವಹಣೆ, ಸಸಿ ಪೋಷಣೆ ಹಾಗೂ ಹಸಿರು ಅಭಿವೃದ್ಧಿಗೆ ಮೀಸಲಿಡಲಾಗುತ್ತಿದೆ. ಆದರೆ ಅದರ ಪರಿಣಾಮ ನೆಲಮಟ್ಟದಲ್ಲಿ ಕಾಣಿಸುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ವಿಶ್ವ ಪರಿಸರ ದಿನಾಚರಣೆ ವೇಳೆ ಸಸಿ ನೆಟ್ಟು ಫೋಟೋಗೆ ಪೋಸ್ ನೀಡುವುದನ್ನು ಬಿಟ್ಟರೆ, ವರ್ಷಪೂರ್ತಿ ಹಸಿರು ಅಭಿವೃದ್ಧಿಗೆ ಆದ್ಯತೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಹಸಿರು ಹೊದಿಕೆಯನ್ನು ವಿಸ್ತರಿಸುವುದು ಅತ್ಯಗತ್ಯವಾಗಿದೆ. ಆದರೆ ಯೋಜನೆಗಳ ಕೊರತೆಯಲ್ಲ, ಅವುಗಳ ಅನುಷ್ಠಾನದ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಿದ್ದಾರೆ. ಮರಗಳಿಲ್ಲದ ಅಭಿವೃದ್ಧಿ ಎಷ್ಟು ದಿನ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಾರೆಯಾಗಿ, ಹಸಿರು ನಗರ ನಿರ್ಮಾಣದ ಭರವಸೆಗಳು, ಕೋಟಿ ಕೋಟಿ ರೂಪಾಯಿ ಅನುದಾನ ಮತ್ತು ಸಾವಿರಾರು ಸಸಿಗಳ ಲಭ್ಯತೆ ಇದ್ದರೂ ಹುಬ್ಬಳ್ಳಿ-ಧಾರವಾಡದಲ್ಲಿ ಮರಗಳ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆ ಬಗ್ಗೆ ಮಾತಿಗಿಂತ ಕಾರ್ಯ ಮುಖ್ಯ ಎಂಬುದನ್ನು ಪಾಲಿಕೆ ಆಡಳಿತ ಅರಿತುಕೊಳ್ಳಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ, ತಾಪಮಾನ ಏರಿಕೆ ಹಾಗೂ ಪರಿಸರ ಹಾನಿಯ ಹೊರೆ ನಗರದ ಜನರ ಮೇಲೇ ಬೀಳಲಿದೆ.
ಕ್ಯಾಮೆರಾಮ್ಯಾನ್ ಹೇಮಂತ್ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ




