Political News: ಶಾಲಾ ಮಕ್ಕಳಿಗೆ ಅನ್ನ ನೀಡಲೂ ಸರ್ಕಾರಕ್ಕೆ ಗತಿಯಿಲ್ಲ!: ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಆಕ್ರೋಶ

Political News: ರಾಜ್ಯದ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ಮಕ್ಕಳಿಗೆ ಸರಿಯಾಗಿ ಬಿಸಿಯೂಟದ ಅನ್ನ ಸಿಗದೇ, ಪ್ರಾಥಮಿಕ ಶಾಲೆ ಮಕ್ಕಳ ಊಟದಲ್ಲೇ ಪಾಲು ಮಾಡಿ ಉಣ್ಣುವ ಪರಿಸ್ಥಿತಿ ಬಂದಿದೆ ಎಂದು ಆರೋಪವಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರವಿ, ಶಾಲೆಗಳು ಆರಂಭಗೊಂಡು ಎರಡು ತಿಂಗಳೇ ಆಗುತ್ತಾ ಬಂದಿದೆ. ಆದರೆ, ಇಂದಿನ ತನಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ ನೀಡಲೂ ಅಸಮರ್ಥ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮಕ್ಕಳಿಗೆ ಅನ್ನ ನೀಡಲೂ ಅಯೋಗ್ಯತನ ಪ್ರದರ್ಶಿಸಿರುವ ಸರ್ಕಾರಕ್ಕೆ ಏನೆನ್ನಬೇಕು?

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿರುವ ಅಕ್ಕಿಯಲ್ಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಬಿಸಿಯೂಟ ವಿತರಿಸಲಾಗುತ್ತಿದ್ದು, ಅಕ್ಕಿಯ ದಾಸ್ತಾನು ಶಾಲೆಗಳಲ್ಲಿ ಖಾಲಿಯಾಗುತ್ತಿದೆ. ಬಡ ಮಕ್ಕಳಿಗೆ ಅನ್ನ ನೀಡಲು ಸರ್ಕಾರದ ಬೊಕ್ಕಸ ಬರಿದಾಗಿದೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ? ಎಂದು ರವಿ ಪ್ರಶ್ನಿಸಿದ್ದಾರೆ.

ಬಡ ವರ್ಗದ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನ ನೀಡುವ ಬಿಸಿಯೂಟ ನೆರವಾಗುತ್ತದೆ. ಆದರೆ ಅವರಿಗೆ ಊಟ ನೀಡಲೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆರ್ಥಿಕ ಇಲಾಖೆ ಅನುಮತಿ ನೀಡಿದ್ದರೂ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದರೂ, ಇಂದಿನ ತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದು ಇಲಾಖೆಯ ಬೇಜವಾಬ್ದಾರಿಯ ಪರಮಾವಧಿಯಾಗಿದೆ.

ಅಕ್ಕಿ ಶಾಲೆಗಳಿಗೆ ತಲುಪಲೇ ಕನಿಷ್ಠ 15 ದಿನ ಬೇಕಿದೆ. ಹೀಗಿರುವಾಗ, ಈಗ ಅನುಮತಿ ಪಡೆದು ಅಕ್ಕಿ ವಿತರಣೆ ಆರಂಭಿಸಿದರೂ, ಅಕ್ಕಿ ತಲುಪುವ ಮುನ್ನವೇ ಈಗಿನ ದಾಸ್ತಾನು ಖಾಲಿಯಾದರೆ ಮಕ್ಕಳನ್ನು ಉಪವಾಸ ಹಾಕುತ್ತೀರೇನು? ಮಕ್ಕಳ ಅನ್ನಕ್ಕೂ ಕಲ್ಲು ಹಾಕಿ ಪಾಪ ಕಟ್ಟಿಕೊಳ್ಳಬೇಡಿ. ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

About The Author