ಬನಶಂಕರಿ ಸ್ಕೈವಾಕ್ ಯೋಜನೆ ಜಾರಿ ಮಾಡಲು ಸಚಿವ ಕೃಷ್ಣಭೈರೇಗೌಡರಿಗೆ ಪತ್ರ ಬರೆದ ತೇಜಸ್ವಿ ಸೂರ್ಯ

Political News: ಬನಶಂಕರಿಯಲ್ಲಿ ಸ್ಕೈವಾಕ್ ನಿರ್ಮಾಣವಾಗದಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ತೇಜಸ್ವಿ ಸೂರ್ಯ ಸಚಿವರಾದ ಕೃಷ್ಣಭೈರೇಗೌಡರಿಗೆ ಸ್ಕೈವಾಕ್ ನಿರ್ಮಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ತೇಜಸ್ವಿ ಸೂರ್ಯ, ಕೆಲವು ವಾರಗಳ ಹಿಂದೆ ಬನಶಂಕರಿಯಲ್ಲಿ ರಸ್ತೆ ದಾಟುತ್ತಿದ್ದ ಒಬ್ಬ ವೃದ್ಧ ಮಹಿಳೆ ಪ್ರಾಣ ಕಳೆದುಕೊಂಡರು. ಸರಿಯಾದ ಪಾದಚಾರಿ ಮೂಲಸೌಕರ್ಯ ಇದ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು.

ಕಳೆದ ಏಳು ವರ್ಷಗಳಿಂದ ಬನಶಂಕರಿ ಸ್ಕೈವಾಕ್ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಜನರು ನಿಜವಾಗಿಯೂ ಬಳಸುವಂತೆ ಪ್ರಾಯೋಗಿಕ ಹಾಗೂ ಪ್ರಯಾಣಿಕ ಸ್ನೇಹಿ ವೃತ್ತಾಕಾರದ ವಿನ್ಯಾಸವನ್ನು ಸಿದ್ಧಪಡಿಸಿದ್ದೇವೆ. ಬಿಬಿಎಂಪಿ ಬಜೆಟ್‌ನಲ್ಲಿ ₹45 ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದೇವೆ. ಶಂಕುಸ್ಥಾಪನೆಯೂ ಆಯಿತು. ಆದರೆ ಇಷ್ಟೆಲ್ಲಾ ಆದರೂ, ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ ಎಂದು ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ಸರಳ ಸ್ಕೈವಾಕ್ ನಿರ್ಮಾಣಕ್ಕೂ ಇಷ್ಟು ವರ್ಷ ಬೇಕೇ? ಅನುಮೋದಿತ ಬನಶಂಕರಿ ಸ್ಕೈವಾಕ್ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು ಮತ್ತು ಅದನ್ನು ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಬಲಿಕೊಡಬಾರದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದೇನೆ. ಈ ಸ್ಕೈವಾಕ್ ಮಾತ್ರವೇ ಟಿಟಿಎಂಸಿ, ಮೆಟ್ರೋ ನಿಲ್ದಾಣ, ಮಾರುಕಟ್ಟೆ ಮತ್ತು ದೇವಸ್ಥಾನಗಳ ನಡುವೆ ಸುರಕ್ಷಿತ, ಸುಗಮ ಹಾಗೂ ಎಲ್ಲರಿಗೂ ಅನುಕೂಲಕರ ಸಂಪರ್ಕ ಕಲ್ಪಿಸಬಲ್ಲದು.

ಮಾನ್ಯ ಸಚಿವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಈ ಬಹುಕಾಲದ ಸಾರ್ವಜನಿಕ ಸುರಕ್ಷತಾ ಯೋಜನೆಯನ್ನು ಕೊನೆಗೂ ಸಾಕಾರಗೊಳಿಸುತ್ತಾರೆ ಎಂಬ ಆಶಯ ನನ್ನದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

About The Author