Jaipur Crime News: ಇತ್ತೀಚಿಗಿನ ಕಾಲದಲ್ಲಿ ಸುದ್ದಿ ಕೇಳ್ತಾ ಇದ್ರೆ, ನಿಜವಾದ ಕಲಿಗಾಲ ಶುರುವಗಿದೆ ಅಂತಾ ಅನ್ನಿಸುತ್ತಿದೆ. ಪ್ರಿಯಕರನಿಗಾಗಿ ವರನನ್ನು ಹತ್ಯೆ ಮಾಡೋದು, ಪ್ರಿಯತಮೆಗಾಗಿ ಪತ್ನಿಯನ್ನು ಹತ್ಯೆ ಮಾಡೋದು, ತಂದೆ ತಾಯಿಯನ್ನು ಹತ್ಯೆ ಮಾಡೋದು, ಹೀಗೆ ಸಂಬಂಧಗಳ ಮಹತ್ವವನ್ನೇ ಮರೆತು ಜನ ಬದುಕುತ್ತಿದ್ದಾರೆ.
ಇದೀಗ ಇಲ್ಲೋರ್ವ ಹುಡುಗಿ, ಸರ್ಕಾರಿ ಕೆಲಸಕ್ಕಾಗಿ ತನ್ನ ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಗನ ಜತೆ ಸೇರಿ, ಹೆತ್ತ ತಾಯಿಯನ್ನೇ ಮುಗಿಸಿದ್ದಾಳೆ. ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು 45 ವರ್ಷದ ನೀರಜ್ ಶರ್ಮಾ ಎಂದು ಗುರುತಿಸಲಾಗಿದೆ. ಮತ್ತು ಹಂತಕಿ 23 ವರ್ಷದ ಆಯುಷಿ ಶರ್ಮಾ ಆಗಿದ್ದಾಳೆ.
ಕಳೆದ ವರ್ಷ ಆಯುಷಿಯ ತಂದೆ ಮತ್ತು ನೀರಜ್ ಪತಿ ನಿಧನರಾಗಿದ್ದರು. ಅವರಿಗೆ ಸರ್ಕಾರಿ ಕೆಲಸವಿತ್ತು. ತಂದೆಯ ಸಾವಿನ ಬಳಿಕ ಆ ಸರ್ಕಾರಿ ಕೆಲಸ ಪತ್ನಿಗೆ ಅಥವಾ ಮಕ್ಕಳಿಗೆ ಸಿಗುತ್ತದೆ. ಆದರೆ ಮಗಳಿನ್ನೂ ಚಿಕ್ಕವಳು, ಇನ್ನೂ ಓದುವ ವಯಸ್ಸು, ಚೆನ್ನಾಗಿ ಓದಿ ಇದಕ್ಕಿಂತ ಉತ್ತಮ ಕೆಲಸವೇ ಪಡಿಯಲಿ ಎಂದು ಪತ್ನಿ ಆ ಸರ್ಕಾರಿ ಕೆಲಸವನ್ನು ಪಡೆದಿದ್ದಾಳೆ.
ಆದರೆ ತಾಯಿಯ ನಿರ್ಧಾರವನ್ನು ಸಹಿಸಲಾಗದೇ, ದುರಾಸೆಗೀಡಾದ ಪುತ್ರಿ ಆಯುಷಿ, ಸರ್ಕಾರಿ ಕೆಲಸ ತನಗೆ ಬೇಕೆಂದು ಮತ್ತು ಆಸ್ತಿ ತನ್ನ ಹೆಸರಾಗಬೇಕು ಎಂದು ಚಿಕ್ಕಪ್ಪ ಮತ್ತು ಅವರ ಮಗನ ಜತೆ ಸೇರಿ, ಅಮ್ಮನ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ.
ಹತ್ಯೆ ಮಾಡಿದರೂ ಅದು ಯಾರಿಗೂ ತಿಳಿಯಬಾರದು. ಮತ್ತು ತಾನು ಸೇಫ್ ಆಗಿರಬೇಕು ಎಂದು ಭರತ್ ಶರ್ಮಾ ಎಂಬುವವನಿಗೆ 7 ಲಕ್ಷ ರೂಪಾಯಿ ಸುಪಾರಿ ನೀಡಿ, ಅಪಘಾತ ಮಾಡುವಂತೆ ಹೇಳಿದ್ದಾರೆ. ನೀರಜ್ ತಮ್ಮ ಮಗನನ್ನು ಕೋಚಿಂಗ್ ಕ್ಲಾಸ್ಗೆ ಬಿಟ್ಟು ಕೆಲಸಕ್ಕೆ ಹೋಗುವಾಗ ಭರತ್ ಶರ್ಮಾ ಸ್ಕಾರ್ಪಿಯೋ ಗಾಡಿಯಿಂದ ನೀರಜ್ರನ್ನು ಅಪಘಾತ ಮಾಡಿದ್ದಾನೆ. ನೀರಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅಂತ್ಯಕ್ರಿಯೆ ಎಲ್ಲ ಆದ ಬಳಿಕ ಸಂಬಂಧಿಕರು ಮತ್ತು ಮಗಳ ಚಲನವಲನಗಳನ್ನು ಗಮನಿಸಿದ್ದ ನೀರಜ್ ಸಹೋದರ, ಇದು ಅಪಘಾತವಲ್ಲ ಹತ್ಯೆ ಎಂದು ದೂರು ನೀಡಿದ್ದಾನೆ. ತನಿಖೆ ಬಳಿಕ ಸತ್ಯ ಆಚೆ ಬಂದಿದೆ.
ಇದೀಗ ಸ್ಥಳೀಯ ಪೋಲೀಸರು ಆಯುಷಿ ಸೇರಿ 7 ಜನರನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ 1 ವಿಷಯ ಬಯಲಾಗಿದ್ದು, ಕಳೆದ 1 ವರ್ಷದಿಂದ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಮತ್ತು ಸರ್ಕಾರಿ ಕೆಲಸ ತನಗೆ ಬೇಕೆಂದು ಮಾನಸಿಕ ಕಿರುಕುಳ ನೀಡುತ್ತಿದ್ದಳು. ಇದರಿಂದಾಗಿ ಬೇಸತ್ತ ನೀರಜ್ ಪೋಲೀಸರ ಬಳಿ ತನಗೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು. ವಿಷಯ ತಿಳಿದ ಆಯುಷಿ, ಅಮ್ಮನನ್ನು ಹತ್ಯೆ ಮಾಡಿಸುವುದೇ ಉತ್ತಮ ಎಂದು ಭಾವಿಸಿ, ಹತ್ಯೆ ಮಾಡಿಸಿದ್ದಾಳೆಂಬ ಸತ್ಯ ಬಯಲಿಗೆ ಬಂದಿದೆ.




