ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕು ಎನ್ನುವುದೇನೋ ಸರಿಯಷ್ಟೇ. ಆದರೆ ಅದು ಎಲ್ಲಿ ನಿರ್ಮಾಣವಾಗಬೇಕು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಕನಕಪುರದಲ್ಲಾ, ಬಿಡದಿಯಲ್ಲಾ ಅಥವಾ ತುಮಕೂರಿನಲ್ಲಾ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ಸ್ವತಃ ಆಡಳಿತಾರೂಢ ಸರ್ಕಾರದಲ್ಲೇ ಭಿನ್ನಾಭಿಪ್ರಾಯಗಳು ಎದ್ದು ಕಾಣುತ್ತಿದ್ದು, ನಾಯಕರ ನಡುವೆ ಸಣ್ಣ ಗೊಂದಲ ವಾತಾವರಣ ಸೃಷ್ಟಿಯಾಗಿದೆ.
ಹಾಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿರುವ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ಬೆಂಗಳೂರಿನ ದಕ್ಷಿಣ ಭಾಗ ಅಂದರೆ ಕನಕಪುರ ಅಥವಾ ಬಿಡದಿ ಸುತ್ತಮುತ್ತ ಹೊಸ ಏರ್‌ಪೋರ್ಟ್ ನಿರ್ಮಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಡಿಪಿಆರ್ (DPR) ಸಿದ್ಧಪಡಿಸಲು ಅವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿಕೆಶಿ ಅವರ ಈ ನಿಲುವಿಗೆ ಭಿನ್ನವಾಗಿ ತಮ್ಮದೇ ಬೇಡಿಕೆಯನ್ನು ಅಖಾಡಕ್ಕಿಳಿಸಿದ್ದಾರೆ. ಕಳೆದ 25 ವರ್ಷಗಳಿಂದಲೂ ತುಮಕೂರಿನಲ್ಲಿಯೇ ಎರಡನೇ ಏರ್‌ಪೋರ್ಟ್ ಆಗಬೇಕು ಎನ್ನುವುದು ನಮ್ಮ ಸತತ ಬೇಡಿಕೆಯಾಗಿದೆ. ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಇಡೀ ರಾಜ್ಯಕ್ಕೆ ಭಾರಿ ಅನುಕೂಲವಾಗಲಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಒಳಗಿನ ಈ ಗೊಂದಲಗಳ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ರಾಜಧಾನಿಗೆ 2ನೇ ಏರ್‌ಪೋರ್ಟ್ ಅಗತ್ಯತೆ ಸ್ವಾಗತಾರ್ಹ, ಆದರೆ ಸ್ವ ಹಿತಾಸಕ್ತಿ ಹಾಗೂ ರಾಜಕೀಯ ಕಾರಣಗಳಿಗೆ ಆದ್ಯತೆ ನೀಡಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬೇಡಿ. ವಿಧಾನಮಂಡಲದಲ್ಲಿ ಮುಕ್ತ ಚರ್ಚೆ ನಡೆಸಿ, ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇನ್ನೊಂದೆಡೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಭಾಗದಲ್ಲಿ ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಲು ರೈತರು ಮುಂದಾಗುತ್ತಾರಾ ಎನ್ನುವುದು ಪ್ರಮುಖ ಸವಾಲಾಗಿದೆ. ಈಗಾಗಲೇ ಬಿಡದಿ ಸುತ್ತಮುತ್ತ ರೈತರ ಹೋರಾಟ ತೀವ್ರಗೊಳ್ಳುತ್ತಿದೆ. ಸಚಿವರ ನಡುವಿನ ಅಭಿಪ್ರಾಯ ವ್ಯತ್ಯಾಸ, ವಿಪಕ್ಷಗಳ ಬಹಿರಂಗ ಪತ್ರದ ಒತ್ತಡ ಹಾಗೂ ಭೂಮಿ ನೀಡಲು ರೈತರ ಪ್ರತಿಭಟನೆಗಳ ನಡುವೆ ರಾಜ್ಯ ಸರ್ಕಾರ ಅಂತಿಮವಾಗಿ ಯಾವ ಜಾಗವನ್ನು ಫಿಕ್ಸ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.




